×
Ad

ಹೊರ ದಬ್ಬಿದ ಬಾಡಿಗೆ ಮನೆ ಮಾಲಕ : ಬೀದಿಪಾಲಾದ ಆರು ಕುಟುಂಬಗಳು

Update: 2017-01-05 18:53 IST

ಚಿಕ್ಕಮಗಳೂರು, ಜ.5: ಬಾಡಿಗೆ ಮನೆಯ ಮಾಲಕನೋರ್ವ ಮನೆಯಿಂದ ಹೊರ ಹಾಕಿದ್ದರಿಂದ ತಲೆ ಮೇಲೆ ಸೂರಿಲ್ಲದೆ ಮರದ ಕೆಳಗೆ ಸುಮಾರು 6 ಕುಟುಂಬಗಳು ವಾಸಿಸುತ್ತಿರುವ ಕರುಳು ಚುರುಕ್ ಎನ್ನುವ ಘಟನೆಯೊಂದು ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.

 ಆರ್ಥಿಕವಾಗಿ ಕಡು ಬಡತನದಲ್ಲಿರುವ 6 ಕುಟುಂಬಗಳ ಜನರು ಉಪ್ಪಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು. ಇವರು ಆರ್ಥಿಕ ಸಮಸ್ಯೆಯಿಂದ ಸಂಕಷ್ಟದ ಜೀವನ ನಡೆಸುತ್ತಿರುವ ಈ ಕುಟುಂಬಗಳಲ್ಲಿ ಕೆಲವರು ಹೃದಯದ ಸಮಸ್ಯೆಯಂತಹ ತೀವ್ರ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಕುಟುಂಬಗಳು ತಾವು ಈಗಾಗಲೇ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಕಾಲಕ್ಕೆ ಸರಿಯಾಗಿ ಬಾಡಿಗೆ ಕಟ್ಟದಿರುವುದು ಸಹಿತ ವಿವಿಧ ವಿಷಯಗಳು ಸೂರು ಕಳೆದುಕೊಳ್ಳಲು ಕಾರಣವಾಗಿದೆ.

 ಕೆಲವು ಕ್ಷುಲ್ಲಕ್ಕ ಕಾರಣಕ್ಕಾಗಿ ರಾತ್ರೋರಾತ್ರಿ ಮಾನವೀಯತೆಯನ್ನು ನೋಡದೆ ಏಕಾಏಕಿ ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ನಾಗವೇಣಿ, ಭಾಗ್ಯಾ, ಗೀತಾ, ಕುಪ್ಪಮ್ಮ, ಶೋಭಾ, ಡಿ.ಲಕ್ಷ್ಮಿ ಸೇರಿದಂತೆ ಕುಟುಂಬಗಳಲ್ಲಿದ್ದ 20 ಜನರನ್ನು ಹೊರ ಹಾಕಿದ್ದಾರೆ. ಇದರಿಂದ ಆಶ್ರಯಕ್ಕೆ ಬೇರೆ ದಾರಿ ಕಾಣದೆ ಉಪ್ಪಳಿಯಲ್ಲಿರುವ ಜಾಯ್ ಕಾಫಿ ಕ್ಯೂರಿಂಗ್ ಹಿಂಭಾಗದಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿರುವ ಮರದ ಕೆಳಗೆ ದಿನ .ಕಳೆದರು. ಇವರಲ್ಲಿ ಸುಮಾರು 12 ಮಂದಿ ಮಕ್ಕಳಿದ್ದು, ಹೆಣ್ಣು ಮಕ್ಕಳು ಸೇರಿದ್ದಾರೆ.

 ವಿಷಯ ತಿಳಿದು ದಲಿತ್ ಜನ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ವಿನಯ್, ಅಮಿತ್ ಸ್ಥಳಕ್ಕೆ ಬೇಟಿ ನೀಡಿ ಪರಿಸ್ಥತಿಯನ್ನು ಅವಲೋಕಿಸಿದರು.

 ಇದೇ ವೇಳೆ ದಲಿತ್ ಜನ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆಯಿಂದ ಸುಮಾರು 10 ವರ್ಷಗಳಿಂದ ವಸತಿ ರಹಿತರಿಗೆ ಮನೆ ನೀಡುತ್ತಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ತಪ್ಪಿನಿಂದ ಆಶ್ರಯ ಮನೆಗಳು ವಸತಿ ಹೀನ ಅರ್ಹ ಫಲಾನುಭವಿಗಳಿಗೆ ಸಿಗದೆ ದಾರಿತಪ್ಪಿದೆ. ಇದರಿಂದ ಇಂತಹ ನಿರ್ಗತಿಕರು ಮರದ ನೆರಳನ್ನು ಆಶ್ರಯಿಸುವಂತಾಗಿದೆ. ಈ ಜನರಿಗೆ ತಾತ್ಕಾಲಿಕ ನೆಲೆಗಾಗಿ ಪುನರ್ ವಸತಿಗಾಗಿ ನಗರಸಭೆಯನ್ನು ಕೇಳಿದರೆ ಅವರ ಬಳಿ ಉತ್ತರವಿಲ್ಲದಂತಾಗಿದೆ. ಕೂಡಲೆ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ನೆಲೆಯಿಲ್ಲದೆ ಬೀದಿ ಪಾಲಾಗಿರುವ ಈ ಆರು ಕುಟುಂಬಗಳಿಗೆ ಶಾಶ್ವತ ನೆಲೆಯನ್ನು ಮಾಡಬೇಕೆಂದು ಒತ್ತಾಯಿಸಿದರು.

 ವಸತಿ ಇಲ್ಲದೆ ಬೀದಿಗೆ ಬಿದ್ದಿರುವ ಈ ಬಡ ಕುಟುಂಬಗಳ ದಿನಚರಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ವಹಿಸುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News