×
Ad

ಶ್ರೀಗಂಧದ ಮರಗಳ ಕಡಿತಲೆ: ಆರೋಪಿಗಳಿಗೆ ಜೈಲು ಶಿಕ್ಷೆ

Update: 2017-01-05 23:08 IST

ಚಿಕ್ಕಮಗಳೂರು, ಜ.5: ಅರಣ್ಯ ಪ್ರವೇಶಿಸಿ ಅಕ್ರಮವಾಗಿ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿದ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.


2015 ಮಾ.3 ರಂದು ಲಿಂಗದಹಳ್ಳಿ ಹೋಬಳಿ ಉಡೇವಾ ಮೀಸಲು ಅರಣ್ಯದ ಕಣಿವೆ ಅಜ್ಜಯ್ಯನ ದೇವಸ್ಥಾನದಿಂದ ಆನೆಗುಂಡಿ ಕಡೆ ಹೋಗುವ ಕಾಲು ದಾರಿಯಲ್ಲಿ ಆರೋಪಿತರಾದ ನಟರಾಜ, ರಾಜು, ಮಂಜು ಯಾನೆ ಕರಡಿ ಮಂಜ ಹಾಗೂ ಚಂದ್ರ ಎಂಬವರು ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದರು. ಅಲ್ಲದೆ ಸುಮಾರು. 1.23 ಲಕ್ಷ ರೂ. ಬೆಲೆ ಬಾಳುವ 82 ಕೆ.ಜಿ ತೂಕದ 14 ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದರು.


 ಈ ಸಮಯದಲ್ಲಿ ಗಸ್ತು ಅರಣ್ಯ ಪಾಲಕರು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ತರೀಕೆರೆ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಕಲಂ 24(ಇ),50, 62, 86 ಮತ್ತು 87 ರ ಅಪರಾಧಕ್ಕೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.


 ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಆರೋಪಿಗಳಾದ ನಟರಾಜ, ರಾಜು, ಮಂಜು ಹಾಗೂ ಚಂದ್ರ ಎಂಬವರಿಗೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ 24(ಇ), 50, 62, 86 ಮತ್ತು 87ರ ಅಪರಾಧಕ್ಕೆ ತಲಾ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ.ಕೆ ಕುಲಕರ್ಣಿ ಮೊಕದ್ದಮೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News