ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ‘ಟಾರ್ಗೆಟ್ 80’ ಉಚಿತ ಕಾರ್ಯಾಗಾರ
ಚಿಕ್ಕಮಗಳೂರು,ಜ.5: ಮಾರ್ಚ್ 30 ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಯ ಶೈಕ್ಷಣಿಕ ಸಾಲಿನ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಟಾರ್ಗೆಟ್ 80 ಎಂಬ ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆ ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಇದೇ ರೀತಿ ಪರೀಕ್ಷೆಯ ಮುನ್ನ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರ ಯಶಸ್ವಿಯಾದ ಹಿನ್ನೆಲೆಯಲ್ಲಿ ಜ.29 ಮತ್ತು ಫೆ.5 ರಂದು ಸಿರಿಗಾಪುರದ ಕಾಲೇಜು ಸಭಾಂಗಣದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಳಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 80ಕ್ಕೆ 80 ಅಂಕಗಳನ್ನು ಪಡೆಯುವ ಬಗ್ಗೆ ನುರಿತ ಶಿಕ್ಷಕರಿಂದ ಮಾರ್ಗದರ್ಶನ ನೀಡಲಾಗುವುದು.
ವಾರ್ಷಿಕ ಪರೀಕ್ಷೆಯ ಬಹು ನಿರೀಕ್ಷಿತ ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಿ ತಮ್ಮಾಳಗಿರುವ ಅನುಮಾನ,ಆತಂಕಗಳನ್ನು ದೂರಮಾಡಿಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿರುವುದರಿಂದ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗಿದ್ದು, ಭಾಗವಹಿಸಲಿಚ್ಛಿಸುವ ನಗರದ ವಿದ್ಯಾರ್ಥಿಗಳು ಮಧ್ಯವಾರ್ಷಿಕ ಪರೀಕ್ಷೆಯ ಅಂಕ ಪಟ್ಟಿಯ ಪ್ರತಿಯೊಂದಿಗೆ ಚೊಕ್ಕಣ್ಣ ಬೀದಿಯ ಲಿಟಲ್ ಸಾಯಿ ಏಂಜಲ್ಸ್‌ನಲ್ಲಿ ಜ.9 ರಿಂದ ಜ.13ರ ವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ನಗರ ಹೊರತು ಪಡಿಸಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಬಾಳೆಹೊನ್ನೂರು ಸರಸ್ವತಿ ಬುಕ್ ಸ್ಟೋರ್ಸ್, ಕಡೂರು ಸಪ್ತಗಿರಿ ಸ್ಟೋರ್ಸ್,ಮೂಡಿಗೆರೆ ಚೈತನ್ಯಾ ಬುಕ್ ಸ್ಟೋರ್ಸ್, ಶೃಂಗೇರಿ ಸುಭಾಷ್ ಏಜೆನ್ಸೀಸ್ ನಲ್ಲಿ ಉಚಿತ ಪಾಸ್‌ಗಳನ್ನು ಪಡೆಯಬಹುದಾಗಿದೆ.