ಸಾಲಬಾಧೆ: ರೈತ ಆತ್ಮಹತ್ಯೆ
Update: 2017-01-06 16:07 IST
ಕಡೂರು, ಜ.6: ಸಾಲದ ಬಾಧೆಯಿಂದ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕು ಸಿಂಗಟಗೆರೆ ಗ್ರಾಮದಲ್ಲಿ ನಡೆದಿದೆ.
ಸಿಂಗಟಗೆರೆ ಗ್ರಾಮದ ಗಣೇಶ ಶೆಟ್ಟಿ ಎಂಬವರ ಪುತ್ರ ಪ್ರದೀಪ್(26) ನೇಣಿಗೆ ಮೃತಪಟ್ಟವರಾಗಿದ್ದಾರೆ. ರಾತ್ರಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದು, ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಪ್ರದೀಪ್ ಸಿಂಗಟಗೆರೆ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಶಾಖೆಯಲ್ಲಿ ರೂ.7 ಲಕ್ಷ ಸಾಲ ಮಾಡಿದ್ದ ಎನ್ನಲಾಗಿದೆ. ಬರಗಾಲದಿಂದಾಗಿ ಇರುವ ತಮ್ಮ ಜಮೀನಿನಲ್ಲಿ ಕಳೆದ ಆರು ತಿಂಗಳಿಂದ ಯಾವುದೇ ಬೆಳೆ ಮಾಡದಿದ್ದು, ಕೊರೆಸಿದ್ದ ಕೊಳವೆಬಾವಿ ಕೂಡ ವಿಫಲವಾಗಿದ್ದರಿಂದ ಬೇಸರಗೊಂಡಿದ್ದರು. ಹೆಚ್ಚಿದ ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.