ಸಿಎಫ್‌ಐನಿಂದ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ

Update: 2017-01-06 17:14 GMT

ಮೂಡಿಗೆರೆ, ಜ.6: ಭಾರತವು ಅತೀ ದೊಡ್ಡ ಸಂಪನ್ಮೂಲ ಭರಿತ ದೇಶವಾಗಿದೆ. ಹಾಗೆಯೇ ಅತ್ಯಧಿಕ ಯುವ ಸಂಪತ್ತು ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಫಯಾಝ್ ಎ.ಎಂ. ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಮೂಡಿಗೆರೆ ಡಿಎಸ್ ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಡ್ರಗ್ಸ್ ದಿ ಕಿಲ್ಲರ್ ಮಾದಕ ದ್ರವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ದೇಶದ ಅಭಿವೃದ್ಧ್ದಿಯಲ್ಲಿ ಮಾನವ ಸಂಪನ್ಮೂಲವೇ ಪ್ರಮುಖವಾಗಿರುತ್ತದೆ. ಸದೃಢ, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ವ್ಯವಸ್ಥೆಗಳಿದ್ದರೂ ಆರೋಗ್ಯವಂತ ಮಾನವ ಸಂಪನ್ಮೂಲವು ಅತೀ ಅಗತ್ಯ ಎಂದು ನುಡಿದರು.

ರಾಷ್ಟ್ರೀಯ ಅಪರಾಧ ಬ್ಯೂರೋ ಪ್ರಕಾರ ನಮ್ಮ ದೇಶ ಮತ್ತು ರಾಜ್ಯದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. 2014ರಲ್ಲಿ ಒಟ್ಟು 3,647 ಆತ್ಮಹತ್ಯೆ ಪ್ರಕರಣಗಳಲ್ಲಿ ಮಾದಕ ವಸ್ತು ಸೇವನೆ ಪತ್ತೆಯಾಗಿವೆ.ಕಳೆದ 10 ವರ್ಷಗಳಲ್ಲಿ ಸಣ್ಣ ವಯೋಮಾನದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ಸುಮಾರು 25,426 ಜನರು ಮಾದಕ ವಸ್ತು ವ್ಯಸನದ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರ ನೀಡಿದರು.

ಒಟ್ಟಾರೆ ವಾರ್ಷಿಕ ಸರಾಸರಿ 2,542 ರಷ್ಟು ಆತ್ಮಹತ್ಯೆಗಳು ಮಾದಕ ವಸ್ತು ಸೇವನೆ ಮೂಲಕ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಇಂದು ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಎಗ್ಗಿಲ್ಲದೆ ಮಾದಕ ದ್ರವ್ಯಗಳು ದೊರೆಯುತ್ತಿರುವುದರಿಂದ ಅಲ್ಲಲ್ಲಿ ಅಪರಾಧ ಮತ್ತು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 2 ವರ್ಷಗಳಲ್ಲಿ ಮಾದಕ ವಸ್ತು ನಿಯಂತ್ರಣ ದಳ 25 ಮಾದಕ ದ್ರವ್ಯ ಜಾಲವನ್ನು ಪತ್ತೆ ಹಚ್ಚಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ನಟೇಶ್ ವಹಿಸಿದ್ದರು.

ಈ ಸಮಯದಲ್ಲಿ ಪ್ರೊ.ಬಸವರಾಜು, ಗ್ರಂಥಪಾಲಕ ರವೀಂದ್ರ ರಾಜನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮೂಡಿಗೆರೆ ತಾಲೂಕು ಅಧ್ಯಕ್ಷ ಮುಹಮ್ಮದ್ ಇಮ್ರಾನ್, ಶಹೀದ್, ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News