ನಿಯಮ ಉಲ್ಲಂಘಿಸಿ ಮದ್ಯ ಸೇವನೆಗೆ ಅವಕಾಶ

Update: 2017-01-06 17:10 GMT

ಶಿವಮೊಗ್ಗ, ಜ.6: ನಗರದ ಒ.ಟಿ. ರಸ್ತೆಯಲ್ಲಿರುವ ಮದ್ಯದಂಗಡಿಯೊಂದರಲ್ಲಿ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಸ್ಥಳದಲ್ಲಿಯೇ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಆ ರಸ್ತೆಯಲ್ಲಿ ಸಾರ್ವಜನಿಕರು ಓಡಾಡದಂತಾಗಿದೆ. ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಯ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ, ನವ ಕರ್ನಾಟಕ ನಿರ್ಮಾಣ ವೇದಿಕೆಯು ಶುಕ್ರವಾರ ನಗರದ ಜಿಲ್ಲಾ ಅಬಕಾರಿ ಭವನದ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿತು. ಆಮಿರ್ ಅಹ್ಮದ್ ಸರ್ಕಲ್‌ನಿಂದ ಹತ್ತಿರದ ಈ ವೈನ್ ಶಾಪ್‌ಗೆ ಸಿ.ಎಲ್. 2 ಪರವಾನಿಗೆ ನೀಡಲಾಗಿದೆ. ಅಬಕಾರಿ ಇಲಾಖೆಯ ನಿಯಮದ ಪ್ರಕಾರ ಕೇವಲ ಮದ್ಯವನ್ನು ಮಾರಾಟ ಮಾಡಬಹುದಾಗಿದ್ದು, ಅಂಗಡಿಯಲ್ಲಿಯೇ ಮದ್ಯ ಸೇವನೆಗೆ ಅವಕಾಶವಿಲ್ಲವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.'


ಆದರೆ ಮದ್ಯದಂಗಡಿಯಲ್ಲಿಯೇ ಮದ್ಯ ಸೇವನೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದು ಅಬಕಾರಿ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ ಇಲ್ಲಿಯವರೆಗೆ ಈ ಅಂಗಡಿಯ ವಿರುದ್ಧ ಅಬಕಾರಿ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ದೂರಿದ್ದಾರೆ. ಈ ಅಂಗಡಿಯಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿರುವುದರಿಂದ ಕೆಲ ಕುಡುಕರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.

ರಸ್ತೆ ಬದಿಯಲ್ಲಿ ಮಲಗುವುದು, ಮಹಿಳೆಯರನ್ನು, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಪ್ರತಿಭಟನೆಯಲ್ಲಿ ವೇದಿಕೆಯ ಜಿಲಾಧ್ಯಕ್ಷ ಮಂಜುನಾಥ್, ಮುಖಂಡರಾದ ರವಿ, ನವೀನ್, ನಿತಿನ್, ನಾಗರಾಜ್, ಪ್ರಕಾಶ್, ಇಮ್ತಿಯಾಝ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News