ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪಿ ಪರಾರಿ
ಶಿವಮೊಗ್ಗ, ಜ. 7: ವಿದ್ಯಾರ್ಥಿನಿಯೋರ್ವಳ ಮೇಲೆ ವಿದ್ಯಾರ್ಥಿಯೋರ್ವ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಪಾದಿತ ವಿದ್ಯಾರ್ಥಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ನಿವಾಸಿ ಶ್ರೀನಿವಾಸ್(23) ಆರೋಪಿತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಈತ ಶಿವಮೊಗ್ಗ ನಗರದ ಪ್ಯಾರ ಮೆಡಿಕಲ್ ಕಾಲೇಜ್‌ವೊಂದರ ವಿದ್ಯಾರ್ಥಿಯಾಗಿದ್ದಾನೆ. ನಗರದ ಡಿಪ್ಲೊಮಾ ಕಾಲೇಜ್‌ವೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದ ಯುವತಿ ಎಂದು ಗುರುತಿಸಲಾಗಿದೆ.
ಈ ಸಂಬಂಧ ಯುವತಿಯು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಘಟನೆ ಹಿನ್ನೆಲೆ: ಆರೋಪಿ ಶ್ರೀನಿವಾಸ್‌ಗೆ ಸ್ನೇಹಿತೆಯೋರ್ವಳ ಮೂಲಕ ಸಂತ್ರಸ್ತ ಯುವತಿಯ ಪರಿಚಯವಾಗಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ, ಯುವತಿಯು ಪ್ರೀತಿಸಲು ನಿರಾಕರಿಸಿದ್ದಳು. ಕಳೆದ ಕೆಲ ತಿಂಗಳುಗಳ ಹಿಂದೆ ಕಾಲೇಜ್‌ನಿಂದ ಆಗಮಿಸುತ್ತಿದ್ದ ವಿದ್ಯಾರ್ಥಿನಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಆರೋಪಿ ಹತ್ತಿಸಿಕೊಂಡಿದ್ದಾನೆ. ತಂಪು ಪಾನೀಯದಲ್ಲಿ ಅಮಲು ಮಾತ್ರೆ ಬೆರೆಸಿ ಕುಡಿಸಿ, ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.
ನಂತರ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಜೊತೆಗೆ ಕೊಲೆ ಬೆದರಿಕೆಯೂ ಹಾಕಿದ್ದ. ಈ ಹಿನ್ನೆಲೆಯಲ್ಲಿ ಯುವತಿಯು ಪೋಷಕರಿಗೆ ವಿಷಯ ತಿಳಿಸಿರಲಿಲ್ಲ ಎನ್ನಲಾಗಿದೆ. ಬೆಳಕಿಗೆ ಬಂದ ಪ್ರಕರಣ: ಘಟನೆಯಿಂದ ತೀವ್ರ ಮನನೊಂದ ಯುವತಿಯು ಆತ್ಮಹತ್ಯೆಗೆ ಮುಂದಾಗಿದ್ದು, ಡೆತ್‌ನೋಟ್ ಬರೆದಿಟ್ಟಿದ್ದಳು.
ಇದನ್ನು ಗಮನಿಸಿದ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿನಿಯು ವಿಷಯ ಬಾಯ್ಬಿಟ್ಟಿದ್ದಾಳೆ. ಪೋಷಕರು ಸಂಘಟನೆಯೊಂದರ ನೆರವಿನೊಂದಿಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ಮೊದಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸಂಘಟನೆಯೊಂದರ ಕಾರ್ಯ ಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರನ್ನು ಭೇಟಿ ಯಾಗಿ ವಿಷಯ ತಿಳಿಸಿದ್ದಾರೆ.
ಎಸ್ಪಿ ಸೂಚನೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಕಾಮುಕ ವಿದ್ಯಾರ್ಥಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.