ಸಿದ್ದಾಪುರ: ರಸ್ತೆ ದುರಸ್ಥಿಗೆ ಒತ್ತಾಯಿಸಿ ಪ್ರತಿಭಟನೆ
ಸಿದ್ದಾಪುರ, ಜ.8: ಸಮೀಪದ ವಾಲ್ನೂರು ತ್ಯಾಗತ್ತೂರಿನಿಂದ ಕಾನನ್‌ಕಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಮತ್ತು ಸ್ಥಳೀಯ ಗ್ರಾಮಸ್ಥರು ಸೇರಿ ರವಿವಾರ ತ್ಯಾಗತ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.
ವರ್ಷಗಳ ಹಿಂದೆ ಮುಖ್ಯ ರಸ್ತೆ ಕಾಂಕ್ರೀಟ್ ಮಾಡುವ ಸಂದರ್ಭ ಬದಲಿ ಮಾರ್ಗವಾಗಿ ವಾಲ್ನೂರು ತ್ಯಾಗತ್ತೂರಿನಿಂದ ಕಾನನ್‌ಕಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಬಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಸಂಪರ್ಕ ರಸ್ತೆಯೂ ಸಂಪೂರ್ಣವಾಗಿ ಹದೆಗೆಟ್ಟಿದೆ. ರಸ್ತೆ ದುರಸ್ಥಿಗೆ ಆಗ್ರಹಿಸಿ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಪಂ ಆಡಳಿತ ಮಂಡಳಿ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಇದುವರೆಗೂ ರಸ್ತೆ ದುರಸ್ಥಿಗೆ ಮುಂದಾಗಲಿಲ್ಲ. ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ತುರ್ತು ಸಂದರ್ಭಗಳಲ್ಲಿ ಬಾಣಂತಿಯರು, ಅಂಗವಿಕಲರು ಸೇರಿದಂತೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕೊಡಗು ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡುರಾವ್ ಅವರ ಬಳಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿದ ಪ್ರತಿಭಟನಾಗಾರರು ಜಿಲ್ಲಾಡಳಿತ ಮತ್ತು ಈ ಭಾಗದ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜನವರಿ 30ರೊಳಗೆ ರಸ್ತೆ ದುರಸ್ಥಿಗೆ ಮುಂದಾಗದಿದ್ದರೆ ವಾಲ್ನೂರು ತ್ಯಾಗತ್ತೂರು ಕುಶಾಲನಗರ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.