×
Ad

ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ: ಸಿದ್ದರಾಮಯ್ಯ

Update: 2017-01-08 19:47 IST

ಬೆಂಗಳೂರು, ಜ.8: ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು 14ನೇ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ವರದಿಯು ಇದನ್ನೇ ಹೇಳಿದೆ. ವಿಶ್ವಬ್ಯಾಂಕಿನ ಹೂಡಿಕೆ ವಾತಾವಾರಣ ಸೂಚ್ಯಂಕದ ವರದಿಯ ಪ್ರಕಾರ ,  ಕರ್ನಾಟಕ ತನ್ನ ಕೈಗಾರಿಕೆ, ವಾಣಿಜ್ಯ ನೀತಿಗಳನ್ನು ವ್ಯಾಪಾರ ವಹಿವಾಟಿಗೆ ತಕ್ಕಂತೆ ರೂಪಿಸುತ್ತಿವೆ.  ಗುಣಮಟ್ಟದ ಜೀವನ ಸಾಗಿಸಲು ಸೂಕ್ತವಾದ ನಗರಗಳ ಬಗ್ಗೆ ನಡೆಸಲಾದ ಜಾಗತಿಕ ಮಟ್ಟದ ಸಮೀಕ್ಷೆಯಲ್ಲಿ ಬೆಂಗಳೂರು 2011ರಲ್ಲೇ ಉತ್ತಮ ನಗರಿ ಎನಿಸಿಕೊಂಡಿದೆ.  ಅತ್ಯಂತ ವೇಗವಾಗಿ ಬಲವರ್ಧನೆಗೊಳ್ಳುತ್ತಿರುವ ಭಾರತೀಯ ಮಾರುಕಟ್ಟೆ ಕರ್ನಾಟಕ ಎಂದು ಸಿದ್ದರಾಮಯ್ಯ ತನ್ನ ಹೇಳಿಕೆಗೆ ಪೂರಕ ಮಾಹಿತಿಯನ್ನು ಒದಗಿಸಿದರು.

 ಕೈಗಾರಿಕೆಗಳ ಸ್ಥಾಪನೆಗೆ 40 ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ರಾಜ್ಯದಲ್ಲಿ 5 ಸಾವಿರ ಕೈಗಾರಿಕೆಗಳು, 20 ಬಿಲಿಯನ್‌ನಷ್ಟು ವಹಿವಾಟು ನಡೆಸುತ್ತಿವೆ . ಹೂಡಿಕೆ ಸ್ನೇಹಿ ಕೈಗಾರಿಕಾ ನೀತಿ, ಅನಿವಾಸಿ ಭಾರತೀಯರಿಗಾಗಿ ‘ಅನಿವಾಸಿ ಭಾರತೀಯ ನೀತಿ’ಯನ್ನು ರಾಜ್ಯ ಸರಕಾರ ರೂಪಿಸಿದೆ ಎಂದ ಅವರು, ಬಂಡವಾಳ ಹೂಡಿಕೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಸದಾ ಸಿದ್ದವಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳ ಹಿಂದೆ ಅಹಮದಾಬಾದಿನಲ್ಲಿ ಪ್ರಧಾನಿ ಮೋದಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಪ್ರವಾಸಿ ಭಾರತೀಯ ದಿವಸ್ ಕರ್ನಾಟಕದಲ್ಲಿ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಈಗ  ಅವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ,  ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವದ ನಂ.1 ಸಂಶೋಧನಾ ಆಧಾರಿತ ಕೇಂದ್ರ ಪ್ರಾರಂಭಿಸಲು ಅವಕಾಶ ನೀಡಬೇಕೆಂದು ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.

 14ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ  72 ದೇಶಗಳ 7200 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News