ನಾಲ್ಕು ಮನೆಗಳಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ
ಮುಂಡಗೋಡ, ಜ.8: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಮನೆಗಳು ಸುಟ್ಟು ಸುಮಾರು 8 ಲಕ್ಷ ರೂ. ಹಾನಿಯಾದ ಘಟನೆ ತಾಲೂಕಿನ ಕಾತೂರ ಪಂಚಾಯತ್ ವ್ಯಾಪ್ತಿಯ ಶಿಂಗ್ನಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಪ್ರಭು ಶಿವಪ್ಪಗೌಡ ಪಾಟೀಲ, ಜಗನ್ನಾಥ ಶಿವಪ್ಪಗೌಡ ಪಾಟೀಲ, ದೇವೆಂದ್ರ ಶಂಭು ಗೌಡ ಪಾಟೀಲ ಹಾಗೂ ಸರೋಜಾ ಕುಬೇರ ಗೌಡ ಪಾಟೀಲ ಎಂಬವರ ಮನೆಗಳಿಗೆ ಬೆಂಕಿ ಹೊತ್ತಿಕೊಂಡು ಕರಕಲಾಗಿವೆ. ದೇವರಿಗೆ ಹಚ್ಚಿದ ದೀಪ ದಿಂದ ಮನೆಗೆ ಬೆಂಕಿ ಹೊತ್ತಿ ಕೊಳ್ಳಲು ಕಾರಣ ಎನ್ನಲಾಗಿದೆ.
ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಬೆಂಕಿ ತಗಲಿದೆ ಎಂದು ಹೇಳಲಾಗುತ್ತಿದ್ದು, ಬೆಂಕಿಯ ಕೆನ್ನಾಲಗೆಪಕ್ಕದಲ್ಲಿದ್ದ ಮನೆಗಳಿಗೆ ವ್ಯಾಪಿಸಿತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮುಂಡಗೋಡ, ಹಾನಗಲ್ ಹಾಗೂ ಶಿರಸಿಯ ಅಗ್ನಿಶಾಮಕ ದಳಗಳು ಆಗಮಿಸಿ ಬೆಂಕಿ ನಂದಿಸಿದ್ದು, ಅಗ್ನಿಶಾಮಕ ದಳಗಳ ತೀಕ್ಷ್ಣ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ಅಪಾರ ಹಾನಿ ತಪ್ಪೆದಂತಾಗಿದೆ. ಮುಂಡಗೋಡ ಠಾಣಾ ಪಿಎಸ್ಸೈ ಲಕ್ಕಪ್ಪ ನಾಯಕ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಜಯಮ್ಮ ಕೃಷ್ಣಾ ಪಾಟೀಲ ಮುಂತಾದವರು ಭೇಟಿ ನೀಡಿ ಮನೆಮಂದಿಗೆ ಸಾಂತ್ವಾನ ಹೇಳಿದ್ದಾರೆ.