ಕುರ್‌ಆನ್ ಮಾನವೀಯ ಮೌಲ್ಯ ಸಾರುವ ಪವಿತ್ರ ಗ್ರಂಥ: ಶಾಸಕ ಶ್ರೀನಿವಾಸ್
ತರೀಕೆರೆ, ಜ.8: ಕುರ್‌ಆನ್ ಮನುಕುಲಕ್ಕೆ ಶಾಂತಿ, ನೆಮ್ಮದಿ, ಸಂಸ್ಕಾರ, ಕಷ್ಟದಲ್ಲಿರುವ ಮನುಷ್ಯರಿಗೆ ಸಹಾಯ ಹಸ್ತ ನೀಡುವ ಮೂಲಕ ಶಿಸ್ತಿನ ಜೀವನ ನಡೆಸುವಂತೆ ಪ್ರೇರೇಪಿಸುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಾರುವ ಮಹಾನ್ ಶಕ್ತಿ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ವತಿಯಿಂದ ಕುರ್‌ಆನ್ ಪ್ರವಚನ ಮತ್ತು ‘ಆದರ್ಶ ಸಮಾಜ’ ‘ಮಹಿಳಾ ಹಕ್ಕುಗಳು’ ವಿಚಾರಗೋಷ್ಠಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಮ್ಮ ಸಮಾಜ ವಿವಿಧತೆಯಲ್ಲಿ ಏಕತೆ ಹೊಂದಿದೆ. ವಿವಿಧ ಜಾತಿ, ಧರ್ಮ, ಜೀವನ ಶೈಲಿಯ ನಡುವೆ ಪರಸ್ಪರ ವಿಶ್ವಾಸ, ನಂಬಿಕೆಗಳಲ್ಲಿ ನಿರ್ಮಾಣವಾಗಿರುವ ಸಮಾಜ ಎಂದರು. ಮನುಷ್ಯತ್ವವನ್ನು ಪ್ರೀತಿಸುವ ಜೊತೆಗೆ ಸಹಬಾಳ್ವೆ , ಜವಾಬ್ದಾರಿ ಯುತ ಜೀವನ, ಉತ್ತರಾಧಿತ್ವದ ಜೊತೆಗೆ ಸರ್ವಧರ್ಮಗಳ ಬಗ್ಗೆ ಸಹಿಷ್ಣುತೆ ಸಾರುವ ಗಂಭೀರ ಸಂದೇಶವನ್ನು ಕುರ್‌ಆನ್ ಭೋದಿಸುತ್ತದೆ ಎಂದರು.
ಆದರ್ಶ ಸಮಾಜ ನಿರ್ಮಾಣದಲ್ಲಿ ಎಲ್ಲಾ ಧರ್ಮಗಳು ಶ್ರಮಿಸುತ್ತಿದ್ದರೆ, ಕೆಲವೇ ಕೆಲವು ಮೂಲಭೂತವಾದಿಗಳು ಒಡೆದು ಆಳುವ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಯಾವುದೇ ಜನಾಂಗದ ಸಂಘಟನೆಯಾದರೂ ತೀವ್ರವಾದಿಗಳಿಂದ ನಡೆಯುವ ಕೋಮು ಗಲಭೆಗಳನ್ನು ನಿಯಂತ್ರಿಸಬೇಕಾದ ಜವಾಬ್ದಾರಿ ಆ ಸಮಾಜಗಳ ಮೇಲಿದೆ. ಸಮಾಜಗಳು ಪರಸ್ಪರ ವಿಶ್ವಾಸ, ನಂಬಿಕೆ, ಜಾತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೋದರೆ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯುವ ಯುಗ ಬದಲಾಗುತ್ತಿದೆ. ಸಮಾಜ ಪ್ರಗತಿಯತ್ತ ಸಾಗಿದರೆ ಕೋಮು ಗಲಭೆಗಳನ್ನು ಹುಟ್ಟುಹಾಕುವ ವಿಚ್ಫಿದ್ರಕಾರಿ ಶಕ್ತಿಗಳನ್ನು ನಿಯಂತ್ರಿಸಬಹುದು ಎಂದು ಅವರು ಅಭಿಪ್ರಾಯಿಸಿದರು.
ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ವ್ಯಾಪಾರ ವಹಿವಾಟುಗಳು ಸೇರಿದಂತೆ ಪ್ರಮುಖವಾಗಿ ಉತ್ಪಾದನಾ ಕ್ಷೇತ್ರ ದಲ್ಲಿ ಅವರು ಪಾಲುದಾರರಾದರೆ ಅವರಿಗೆ ಸಹಜವಾಗಿಯೇ ದೃಢತೆಯ ಮೂಲಕ ಸ್ವಾವಲಂಬಿಗಳಾಗಿ ಅವರ ಹಕ್ಕುಗಳನ್ನು ಪ್ರತಿಪಾದಿಸುವ ಶಕ್ತಿ ಬರಲಿದೆ ಎಂದರು.
ಬದಲಾದ ವ್ಯವಸ್ಥೆಯಲ್ಲಿ ಮೌಢ್ಯಗಳನ್ನು ತೊರೆದು ಹೆಣ್ಣು ಮಕ್ಕಳು ಪುರುಷ ಪ್ರಧಾನ ಸಮಾಜವನ್ನು ಎದುರಿಸಿ ತಾವು ಸಮ ರ್ಥರು ಎಂದ ತೋರಿಸಿಕೊಳ್ಳಬೇಕಾದ ದಿನ ಬಂದಿದೆ ಎಂದು ಶಾಸಕರು ತಿಳಿಸಿದರು.
ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿ, ಜಗತ್ತಿಗೆ ಭಗವದ್ಗೀತೆ, ಶರಣರ ವಚನಗಳು, ಬೈಬಲ್, ಕುರ್‌ಆನ್ ಸೇರಿದಂತೆ ಅನೇಕ ಧರ್ಮ ಗ್ರಂಥಗಳು ಮೌಲ್ಯಗಳನ್ನು ಹೇಳಿಕೊಟ್ಟಿವೆಯೇ ಹೊರತು ಯಾವುದೇ ವಿಜ್ಞಾನದ ಅವಿಷ್ಕಾರವಲ್ಲ ಎಂದರು.
ಯುವ ಜನತೆ ಮನೋರಂಜನೆಯಲ್ಲಿ ಬದುಕುತ್ತಿದ್ದಾರೆ. ಗಂಭೀರ ಸಂವಾದ, ಸಾಹಿತ್ಯ ಅಧ್ಯಯನ ಕಡಿಮೆಯಾಗುತ್ತಿದೆ. ಪ್ರವಾದಿ ಹೇಳಿದಂತೆ ನಾವು ಮೊದಲು ನಮ್ಮನ್ನು ಗೌರವಿಸಿ ಕೊಳ್ಳಬೇಕು. ಪತ್ನಿ, ಮಕ್ಕಳಿಂದ ಪ್ರೀತಿಸಲ್ಪಡುವವನೇ ನಿಜವಾದ ಪುರುಷನಾಗಿದ್ದಾನೆ ಎಂದರು. ಕುರ್‌ಆನ್‌ನಲ್ಲಿ ಜೀವನ ನಡೆಸುವ ವಿಧಾನವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಮನುಷ್ಯ ಸಕಾರಾತ್ಮಕವಾಗಿ ಚಿಂತನೆ ಮಾಡಿದರೆ ಸಾಧನೆಗಳನ್ನು ಮಾಡಬಹುದು. ನಕಾರಾತ್ಮಕ ಚಿಂತನೆಗಳು ಒಂದು ರೋಗವಿದ್ದಂತೆ ಬರೀ ದೇಹಕ್ಕಲ್ಲ ಪರಿಸರಕ್ಕೂ ಸಮಾಜಕ್ಕೂ ಈ ರೋಗ ಅಂಟಿಕೊಂಡು ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಝೀರುದ್ದೀನ್ ಕುರ್‌ಆನ್ ಪಠಿಸಿದರು. ಕುರುಬ ಸಮಾಜದ ಅಧ್ಯಕ್ಷ ಹಾಲವಜ್ರಪ್ಪ, ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎನ್. ವೆಂಕಟೇಶ್, ಪುರಸಭೆ ಸದಸ್ಯ ಆದಿಲ್ ಪಾಷ, ಮುಖಂಡರಾದ ಶೇಕ್ ಹಸನ್, ಗೋಪಾಲಕೃಷ್ಣ, ಇಸ್ಮಾಯೀಲ್, ಜಬೀವುಲ್ಲಾ ಹಕ್, ಶೇಕ್ ಜಾವಿದ್ ಮತ್ತಿತರರು ಉಸ್ಥಿತರಿದ್ದರು.