ಮಡಿಕೇರಿ: ಅಥ್ಲೆಟಿಕ್ಸ್ ಸೆಂಟರ್ ಲೋಕಾರ್ಪಣೆ

Update: 2017-01-08 17:57 GMT

ಮಡಿಕೇರಿ, ಜ.8: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯದಲ್ಲಿ ಫೌಂಡೇಶನ್‌ನ ಆವರಣದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಥ್ಲೆಟಿಕ್ಸ್ ಸೆಂಟರ್‌ನ್ನು ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ವಿಜಯ್ ಗೋಯಲ್ ಲೋಕಾರ್ಪಣೆಗೊಳಿಸಿದರು.

 ಕೇಂದ್ರ ಸರಕಾರದ 5 ಕೋಟಿ ರೂ. ರಾಜ್ಯ ಸರಕಾರದ 1 ಕೋಟಿ ರೂ., ಎಎಸ್‌ಎಫ್‌ನ 3 ಕೋಟಿ ರೂ. ಅನುದಾನದಲ್ಲಿ ರೂಪುಗೊಂಡ ನೂತನ ಸಿಂಥೆಟಿಕ್ ಟ್ರ್ಯಾಕ್ ಒಳಗೊಂಡ ಅಥ್ಲೆಟಿಕ್ಸ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಸಚಿವರು, 2020-24ರ ಒಲಿಂಪಿಕ್ಸ್ ಗಮನದಲ್ಲಿಟ್ಟಿಕೊಂಡು ಕೇಂದ್ರ ಸರಕಾರ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಖೇಲ್ ರತ್ನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ತಂಡವನ್ನು ರಚಿಸಲಾಗುತ್ತಿದೆ ಎಂದರು.


 ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬಜೆಟ್‌ನಲ್ಲಿ ಕೀಡೆಗೆ ಸಂಬಂಧಪಟ್ಟಂತೆ ಕಡಿಮೆ ಅನುದಾನ ಮೀಸಲಿಡಲಾಗುತ್ತಿದ್ದು, ಅನುದಾನ ಹೆಚ್ಚಿಸುವ ಬಗ್ಗೆ ಪ್ರಧಾನಿ ಅವರಲ್ಲಿ ಚರ್ಚಿಸಿರುವುದಾಗಿ ಅವರು ತಿಳಿಸಿದರು.
ಎಳೆಯ ಕ್ರೀಡಾಪಟುಗಳಿಗೆ ಮೈದಾನದ ಕೊರತೆ ಇರುವುದರಿಂದ ಎಳೆ ವಯಸ್ಸಿನಲ್ಲೇ ಕೀಡೆಯೆಡೆಗೆ ಸೆಳೆಯಲು ಕಷ್ಟ ಸಾಧ್ಯವಾಗುತ್ತಿದೆ. ಕ್ರೀಡಾ ಪ್ರತಿಭಾನ್ವೇಷಣೆ ಯೋಜನೆ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಕ್ರೀಡಾಪಟು ತನ್ನ ಸಾಧನೆಯನ್ನು ವೀ ಡಿಯೊಮೂಲಕ ಸಾಯ್ ಸೆಂಟರ್ ಕಳುಹಿಸಿದ್ದಲ್ಲಿ ಅವರನ್ನು ಗುರುತಿಸುವ ಕಾರ್ಯ ಮಾಡಲಾಗುವುದು ಎಂದರು.


ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರಿಯ ಕ್ರೀಡಾ ಫೌಂಡೆಷನ್ ಸ್ಥಾಪಿಸಲಾಗುವುದು. ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಹಲವು ಯೋಜನೆಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ವಿಶ್ವಾಸವಿದೆ. ಕ್ರೀಡೆಗೆ ಮೂಲಭೂತ ಸೌಕರ್ಯ ವಿದ್ದರೂ ಉತ್ತಮ ಆಡಳಿತ ವ್ಯವಸ್ಥೆಯ ಆವಶ್ಯಕತೆ ಇದೆ ಎಂದರು.


  ಭಾರತೀಯ ಕ್ರೀಡಾಪಟುಗಳು ಅಥ್ಲೆಟಿಕ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂಬುದು ಇಡೀ ದೇಶದ ಜನರ ಆಶಯವಾಗಿದೆ. ಆ ದಿಸೆಯಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. 2020ಕ್ಕೆ ನಡೆಯುವ ಅಥ್ಲೆಟಿಕ್ಸ್ ಗೆ ಕ್ರೀಡಾಪಟುಗಳು ಸಿದ್ಧಗೊಳ್ಳುವಂತಾಗಲು ಅಗತ್ಯ ತರಬೇತಿ ಹಾಗೂ ಸಹಕಾರ ನೀಡಲು ಸರಕಾರ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಕೇಂದ್ರ ಕ್ರೀಡಾ ಸಚಿವರು ತಿಳಿಸಿದರು. ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸರಕಾರಕ್ಕಿಂತ ಸರಕಾರೇತರ ಸೇವಾ ಕ್ರೀಡಾ ಸಂಸ್ಥೆಗಳು ಕ್ರೀಡೆಗೆ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ.

ಮುಂದಿನ ದಿನಗಳಲ್ಲಿ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ ನೀಡುವಂತೆ ಕ್ರೀಡೆಗೆ ಪ್ರೋತ್ಸಾಹ ನೀಡುವ ಸರಕಾರೇತರ ಸೇವಾ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
 ರಾಜ್ಯ ಸರಕಾರ ಕ್ರೀಡೆಗೆ ಬಜೆಟ್‌ನಲ್ಲಿ ಮೀಸಲಿಡುತ್ತಿರುವ 145 ಕೋಟಿ ರೂ. ಅನುದಾನವನ್ನು ದುಪ್ಪಟ್ಟು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಕೇಂದ್ರ ಸರಕಾರದಿಂದ ಮತ್ತಷ್ಟು ಆರ್ಥಿಕ ಅನುದಾನ ಪಡೆಯುವ ಸಲುವಾಗಿ 120 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಇದನ್ನು ಪರಿಗಣಿಸುವ ಆಶಾಭಾವನೆ ಇದೆ ಎಂದು ಸಚಿವ ಪ್ರಮೋದ್ ನುಡಿದರು.


ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಕೂಡಿಗೆ, ನಾಪೋಕ್ಲು, ಅಮ್ಮತ್ತಿಯಲ್ಲಿ ಅಸ್ಟೋಟ್ರರ್ಫ್ ನಿರ್ಮಾಣದ ಆವಶ್ಯಕತೆ ಇದೆ. ಕಾಲ್ಸ್ ಶಾಲಾ ಆವರಣದಲ್ಲಿ ಆಸ್ಟ್ರೋಟರ್ಫ್ ಮೈದಾನ ನಿರ್ಮಾಣಕ್ಕೆ ಬೇಡಿಕೆ ಇಡುವುದಾಗಿ ತಿಳಿಸಿದರು.
 ಈ ಸಂದರ್ಭ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ಸಾಧನೆಗೈದ ಕ್ರೀಡಾಪಟುಗಳಾದ ನರೇನ್ ಕಾರ್ಯಪ್ಪ, ವೈಷ್ಣವಿ, ರಮೇಶ್, ದಿವ್ಯಾ, ಜಸ್ಟಿನ್, ಭರತ್, ರಜತ್ ಅವರನ್ನು ಗೌರವಿಸಲಾಯಿತು.


ಎಎಸ್‌ಎಫ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಸಲಹೆಗಾರ ದತ್ತಾ ಕರುಂಬಯ್ಯ, ಪ್ರಾಂಶುಪಾಲೆ ಗೌರಮ್ಮ ಉಪಸ್ಥಿತರಿದ್ದರು. ಸಚಿವ ವಿಜಯ್ ಗೋಯಲ್ ರೊಂದಿಗೆ ಪತ್ನಿ ಪ್ರೀತಿ ಗೋಯಲ್ ಪಾಲ್ಗೊಂಡಿದ್ದರು.


 ಥ್ಲೆಟಿಕ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗಳಿಸಿದವರಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಜೊತೆಗೆ ಕ್ರೀಡಾಕ್ಷೇತ್ರದ ಉನ್ನತ ಪ್ರಶಸ್ತಿ ನೀಡಲಾಗುವುದು. ಪ್ರಸ್ತಾವನೆ ಸಲ್ಲಿಸಿದಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಲಾಗುವುದು.
 ವಿಜಯ್ ಗೋಯಲ್
ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News