ಬೆಂಕಿ ಆಕಸ್ಮಿಕ: ಮನೆಗೆ ಅಪಾರ ಹಾನಿ
ಮುಂಡಗೋಡ, ಜ.9: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ಪಟ್ಟಣದ ನೆಹರು ನಗರ(ಪಿಎಲ್‌ಡಿ ಬ್ಯಾಂಕ್ ಹಿಂದೆ)ದಲ್ಲಿ ಇಂದು ಬೆಳಗ್ಗೆ ನಡೆದಿದೆ
ಸುಂದರಾಬಾಯಿ ಶೇಟ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ಟ್ಯಾಕ್ಸಿ ಸ್ಟಾಂಡ್ ಏಜೆಂಟ್ ಅಶೋಕ ಮೈಸೂರು ಎಂಬವರ ಮನೆಯೇ ಬೆಂಕಿಯಿಂದ ಹಾನಿಗೀಡಾಗಿರುವುದು.
ಇಂದು ಬೆಳಗ್ಗೆ ನೀರು ಕಾಯಿಸಲು ಒಲೆ ಹಚ್ಚಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಕಿ ಪ್ರಖರತೆಯಿಂದ ಮನೆಯಲ್ಲಿನ ಎಲ್ಲ ಸಾಮಾನುಗಳು ಭಸ್ಮಗೊಂಡಿವೆ. ಈ ಸಂದರ್ಭ ಮನೆಯಲ್ಲಿದ್ದ ವೀಣಾ ಮೈಸೂರು ಅವರ ಕೈಗೂ ಸುಟ್ಟ ಗಾಯಗಳಾಗಿವೆ.
ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದ ವೀಣಾ ವ್ಯಾಪಾರಕ್ಕೆ ತಂದಿಟ್ಟ ಸೀರೆಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ ಎಂದು ಹೇಳಲಾಗಿದೆ.
ಮುಂಡಗೋಡ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿ ಪಕ್ಕದ ಮನೆಗಳಿಗೆ ಬೆಂಕಿ ತಾಗುವುದನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪ.ಪಂ. ಅಧ್ಯಕ್ಷ ರಫೀಕ್ ಇನಾಮ್ದಾರ್, ಪ.ಪಂ ಸದಸ್ಯ ಸಂಜು ಪಿಶೆ ಮುಂತಾದವರು ಭೇಟಿ ನೀಡಿದ್ದಾರೆ.