ಈಗಲೇ ಆಡಳಿತ ಕೆಟ್ಟಿದೆ, ಮತ್ತೆ ಇಂಥವರನ್ನು ಲೋಕಾಯುಕ್ತನ್ನಾಗಿ ಮಾಡಬೇಡಿ: ಎ.ಟಿ.ರಾಮಸ್ವಾಮಿ

Update: 2017-01-09 14:29 GMT

ಬೆಂಗಳೂರು, ಜ.9: ಲೋಕಾಯುಕ್ತ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿಗಳಾದ ವಿಶ್ವನಾಥಶೆಟ್ಟಿ, ಎನ್.ಕೆ.ಪಾಟೀಲ್ ಹಾಗೂ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರ ಹೆಸರು ಪ್ರಸ್ತಾಪವಾದ ಬೆನ್ನಲ್ಲೆ, ಪುನಃ ಇಂಥವರನ್ನು ಲೋಕಾಯುಕ್ತನ್ನಾಗಿ ಮಾಡಬೇಡಿ ಎಂದು ಅಕ್ರಮ ಭೂ ಕಬಳಿಕೆ ಜಂಟಿ ಸದನ ಸಮಿತಿ ಮಾಜಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕಾಯುಕ್ತ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿಗಳಾದ ವಿಶ್ವನಾಥಶೆಟ್ಟಿ, ಎನ್.ಕೆ.ಪಾಟೀಲ್ ಹಾಗೂ ಹಾಲಿ ನ್ಯಾಯಮೂರ್ತಿ ಆನಂದ್‌ಭೈರಾರೆಡ್ಡಿ ಅವರ ಹೆಸರು ಪ್ರಸ್ತಾಪವಾಗಿದೆ. ಈ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದೆಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಎ.ಟಿ.ರಾಮಸ್ವಾಮಿ ಪ್ರತಿಕ್ರಿಯಿಸಿ, ಈಗಲೇ ಆಡಳಿತ ಕೆಟ್ಟಿದೆ. ಮತ್ತೆ ಇಂಥವರನ್ನು ಲೋಕಾಯುಕ್ತರನ್ನಾಗಿ ಮಾಡಬೇಡಿ ಎಂದು ಸರಕಾರಕ್ಕೆ ಸೂಚನೆ ನೀಡಿದ್ದಾರೆ.

  ಹಿಂದೆ ನಿವೃತ್ತ ನ್ಯಾ.ಭಾಸ್ಕರ್ ರಾವ್ ಆಯ್ಕೆಯಾದಾಗಲು ಇದೇ ಮಾತು ಹೇಳಿದ್ದೆ, ಆದರೆ, ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅಲ್ಲದೆ, ಭ್ರಷ್ಟಾಚಾರವನ್ನು ನಿಯಂತ್ರಿಸ ಬೇಕಾದವರೆ ಕಟಕಟೆಯಲ್ಲಿ ನಿಂತು ರಾಜ್ಯದ ಲೋಕಾಯುಕ್ತ ಮಾನವನ್ನು ಹರಾಜು ಹಾಕಿದರು ಎಂದು ರಾಮಸ್ವಾಮಿ ನುಡಿದರು.

 ಆರೋಪ: ಇದೀಗ ಶಿಫಾರಸ್ಸುಗೊಂಡಿರುವ ಪಟ್ಟಿಯಲ್ಲಿರುವವರು ನ್ಯಾಯಾಂಗ ಇಲಾಖೆ ನೌಕರರ ಸಂಘಕ್ಕೆ ಸೇರಿದ್ದಾರೆ. ಅದು ಅಲ್ಲದೆ, ಅಕ್ರಮವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದಿಂದ 80*120 ಅಳತೆಯುಳ್ಳ ನಿವೇಶವನ್ನ ಪಡೆದಿದ್ದಾರೆ. ನಿವೇಶನ ಪಡೆಯುವಾಗ ನಿವೇಶನ ರಹಿತ ಎಂಬ ಪ್ರಮಾಣ ಪತ್ರ ನೀಡಿ ವಂಚಿಸಿದ್ದಾರೆ ಎಂದು ದೂರಿದರು.

ಹೈಕೋರ್ಟ್ ನೀಡಿರುವ ಸ್ಪಷ್ಟ ಆದೇಶದ ಪ್ರಕಾರ ಹೈಕೋರ್ಟ್ ನ್ಯಾಯಾಧೀಶರು ನೌಕರರಲ್ಲ, ಬದಲಾಗಿ ಸಂವಿಧಾನ ನಿಯೋಜಿತ ಪ್ರತಿನಿಧಿಗಳಾಗಿದ್ದಾರೆ. ಹೀಗಿರುವಾಗ, ನ್ಯಾಯಾಂಗ ನೌಕರರ ಬಡಾವಣೆಯಲ್ಲಿ ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿರುವುದು ತಪ್ಪು. ಇಂತಹವರನ್ನೆಲ್ಲ ಸರಕಾರ ಭ್ರಷ್ಟಾಚಾರ ನಿಯಂತ್ರಿಸುವ ಪ್ರಮುಖ ಹುದ್ದೆಗೆ ನೇಮಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಮಸ್ವಾಮಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News