ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ‘ಗ್ಯಾಸ್ ಸ್ಟೌವ್’: ಸಚಿವ ಯು.ಟಿ.ಖಾದರ್
ಬೆಂಗಳೂರು, ಜ. 9: ಕೇಂದ್ರದ ‘ಉಜ್ವಲ’ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆಯುವ ಬಿಪಿಎಲ್ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಉಚಿತವಾಗಿ ಅಡುಗೆ (ಓಲೆ)‘ಸ್ಟೌವ್’ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸ್ಟೌವ್ ಜೊತೆಗೆ ರೆಗ್ಯುಲೇಟರ್ ಮತ್ತು ರಬ್ಬರ್ ಕೊಳವೆಯನ್ನು ಉಚಿತವಾಗಿ ನೀಡಲಾಗುವುದು. ಉಜ್ವಲ ಯೋಜನೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದರು.
‘ಉಜ್ವಲ’ ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು. ಉದ್ದೇಶಿತ ಯೋಜನೆಯಡಿ ಎಲ್‌ಪಿಜಿ ಸಂಪರ್ಕಕ್ಕಾಗಿ ಈಗಾಗಲೇ 3 ಲಕ್ಷ ಅರ್ಜಿಗಳು ಬಂದಿವೆ. ಒಬ್ಬರಿಗೆ 1ಸಾವಿರ ರೂ.ವೆಚ್ಚವಾಗಲಿದ್ದು, ಅದನ್ನು ರಾಜ್ಯ ಸರಕಾರವೇ ಭರಿಸಲಿದೆ. ಕೇಂದ್ರ ಸರಕಾರ ಅಡುಗೆ ಅನಿಲದ ಸಿಲಿಂಡರ್ ಉಚಿತವಾಗಿ ನೀಡಲಿದೆ ಎಂದರು.
ಆನ್‌ಲೈನ್ ಮೂಲಕ ಪಡಿತರ ಚೀಟಿ: ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಚೀಟಿಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಆಹಾರ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.
ಎಪಿಎಲ್ ಕಾರ್ಡ್ ಪಡೆಯುವವರು ಆನ್‌ಲೈನ್ ಮೂಲಕ ಆಧಾರ್ ಸಂಖ್ಯೆ ನಮೂದಿಸಿ ತಕ್ಷಣವೇ ಸ್ಥಳದಲ್ಲೆ ತಾತ್ಕಾಲಿಕ ಕಾರ್ಡ್ ಪಡೆದುಕೊಳ್ಳಬಹುದು. ಇದಾದ ಹದಿನೈದು ದಿನಗಳ ಬಳಿಕ ಅರ್ಜಿದಾರರ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಖಾಯಂ ಕಾರ್ಡ್ ಬರಲಿದ್ದು, ಆ ಕಾರ್ಡ್‌ಗೆ 100ರೂ.ಪಾವತಿಸಬೇಕೆಂದು ಮಾಹಿತಿ ನೀಡಿದರು.
ರಾಜ್ಯದ ಯಾವುದೇ ಭಾಗದಿಂದಲೂ ಆನ್‌ಲೈನ್ ಮೂಲಕ ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ತಕ್ಷಣವೇ ಅವರಿಗೆ ತಾತ್ಕಾಲಿಕ ಕಾರ್ಡ್ ದೊರೆಯಲಿದ್ದು, ಅದನ್ನು ಬಳಸಿ ಪಡಿತರ ಪಡೆಯಬಹುದು ಎಂದ ಅವರು, ಎಪಿಎಲ್ ಕಾರ್ಡ್ ಪಡೆಯಲು ಈ ಮೊದಲು ಇದ್ದ ಎಲ್ಲ ಷರತ್ತುಗಳನ್ನು ರದ್ದುಪಡಿಸಲಾಗಿದೆ ಎಂದರು.
ಎಪಿಎಲ್ ಕಾರ್ಡ್‌ಗೆ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆದು ಹಾಕಲು ಅವಕಾಶ ಕಲ್ಪಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ahara.kar.nic.in ಸಂಪರ್ಕಿಬಹುದು. ಇದರಿಂದ ತ್ವರಿತಗತಿಯಲ್ಲಿ ಎಪಿಎಲ್ ಪಡಿತರ ಚೀಟಿ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಬಿಪಿಎಲ್‌ಗೆ ಅರ್ಜಿ: ಬಿಪಿಎಲ್ ಪಡಿತರ ಚೀಟಿ ಪಡೆಯಲು ಇನ್ನೂ ಹದಿನೈದು ದಿನಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಚಾಲನೆ ನೀಡಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಪಂನಲ್ಲಿ ಹಾಗೂ ನಗರ ಪ್ರದೇಶದಲ್ಲಿ ಬೆಂಗಳೂರು ಓನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಪಡೆಯಲು ಆಧಾರ್ ಸಂಖ್ಯೆ ಜತೆಗೆ ಬಯೋಮೆಟ್ರಿಕ್ ನೀಡಬೇಕಾಗುತ್ತದೆ. ಇದರಿಂದ ಪಡಿತರ ಚೀಟಿ ಪಡೆಯಲು ಆಗುತ್ತಿದ್ದ ವಿಳಂಬ ತಪ್ಪಲಿದೆ ಎಂದರು.