×
Ad

ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

Update: 2017-01-09 22:54 IST

ದಾವಣಗೆರೆ, ಜ.9: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ತಾಲೂಕುಗಳು ಈಗಾಗಲೇ ಸಂಪೂರ್ಣ ಬರಪೀಡಿತ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಆದ್ದರಿಂದ ಇಲಾಖಾ ಅಧಿಕಾರಿಗಳು ತಮ್ಮಲ್ಲಿರುವ ಅನುದಾನವನ್ನು ಸಮರ್ಥವಾಗಿ ವಿನಿಯೋಗಿಸುವ ಮೂಲಕ ನಿರೀಕ್ಷಿತ ಗುರಿ ಸಾಧಿಸಬೇಕು. ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದ ಇಲಾಖೆಗಳನ್ನು ಗುರುತಿಸಿ ಅಂತಹ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ಅನುದಾನ ಸಂಪೂರ್ಣ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.


ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು, ದನಕರು, ಪ್ರಾಣಿ ಪಕ್ಷಿಗಳಿಗಾಗಿ ನೀರಿನ ತೊಟ್ಟಿ ನಿರ್ಮಾಣ, ಮೇವು ಸಂಗ್ರಹಣೆ ಹಾಗೂ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸುವ ಮೂಲಕ ಬರಪರಿಸ್ಥಿತಿಯಿಂದ ಯಾರಿಗೂ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಎಲ್ಲ ಇಲಾಖಾ ಅಧಿಕಾರಿಗಳ ಮೇಲಿದೆ ಎಂದು ಅವರು ತಿಳಿಸಿದರು.


ಅಪರ ಜಿಲ್ಲಾಧಿಕಾರಿ ಪದ್ಮಬಸಂತಪ್ಪ ಮಾತನಾಡಿ, ದನಕರುಗಳಿಗೆ ಮೇವಿನ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 23 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹಣೆಯಾಗಿದೆ. ಇನ್ನು ಕೆಲವು ಕಡೆ ಸಂಗ್ರಹಣೆ ಮಾಡಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಉಮಾ ಶಂಕರ್, ಮೇವನ್ನು ಎಷ್ಟು ಸಿಕ್ಕರೂ ಖರೀದಿಸಿ ಸಂಗ್ರಹಿಸಿ. ಕಾರಣ, ರಾಜ್ಯದ ಅನೇಕ ಜಿಲ್ಲೆಳಿಗೆ ಮೇವಿನ ತೀವ್ರ ಕೊರತೆ ಇರುವುದರಿಂದ ನಮ್ಮಲ್ಲಿರುವ ಹೆಚ್ಚಿನ ಸಂಗ್ರಹದ ಮೇವನ್ನು ಬೇರೆ ಜಿಲ್ಲೆಗಳಿಗೆ ನೀಡಬಹುದು ಎಂದ ಅವರು, ಕಡ್ಡಾಯವಾಗಿ ಎಲ್ಲ ಭಾಗದಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಮೂಲಕ ಜಾನುವಾರು, ಪಶುಪಕ್ಷಿಗಳಿಗೆ ಅನುಕೂಲ ಮಾಡಿಕೊಡಿ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿ ತೊಟ್ಟಿ ನಿರ್ಮಾಣ ಮಾಡಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.


ಈ ಬಾರಿ ಮಳೆಯ ಅಭಾವದಿಂದ ಮುಂಬರುವ ಮಳೆಗಾಲಕ್ಕೆ ಬೀಜದ ವ್ಯವಸ್ಥೆ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಷ್ಟು ಬೀಜ ಸಂಗ್ರಹ ಮಾಡಿದ್ದೀರಿ? ಎಂದು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ನಿರ್ದೇಶಕರನ್ನು ಉಮಾಶಂಕರ್ ಪ್ರಶ್ನಿಸಿದರು.
ಆಗ ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಇಲ್ಲದಿರುವುದರಿಂದ ಈ ಬಾರಿ ಭತ್ತದ ಬೆಳೆ ಇಲ್ಲವಾಗಿದೆ.

ಒಣಭೂಮಿಯಲ್ಲಿ ಸರಾಸರಿಗಿಂತಲೂ ಮೂರನೆ ಒಂದರಷ್ಟು ಬಿತ್ತನೆಯಾಗಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯದಿಂದ ಕೇವಲ ಮೂರನೆ ಒಂದರಷ್ಟು ಮಾತ್ರ ಬೆಳೆ ರೈತರ ಕೈಗೆ ಸೇರಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಬೀಜ ಸಂಗ್ರಹಣೆ ಮಾಡಲು ಸಾಧ್ಯವಾಗಿಲ್ಲವೆಂದು ಮಾಹಿತಿ ನೀಡಿದರು.
ಕಳೆದ ವರ್ಷ ಸುಮಾರು 17 ಸಾವಿರ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ಈ ಬಾರಿ ಅದರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಅದೇರೀತಿ ತೋಟಗಾರಿಕಾ ಕ್ಷೇತ್ರದಲ್ಲಿ 4,565 ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ಬೆಳೆ ಪರಿಹಾರದಲ್ಲಿ 1.7 ಲಕ್ಷ ರೈತರಿಗೆ ಬೆಳೆಪರಿಹಾರ ನೀಡಬೇಕಾಗಿದ್ದು,  ಇದೀಗ ಅದು 1.80 ಲಕ್ಷಕ್ಕೆ ತಲುಪಿದೆ. ಒಟ್ಟು ಕೃಷಿ ಇಲಾಖೆಯಿಂದ ರೈತರಿಗೆ 112 ಕೋಟಿ ಬೆಳೆವಿಮೆಗಾಗಿ ಆವಶ್ಯಕತೆ ಇದೆ. ಹಣ ಬಿಡುಗಡೆಯಾದ ಕೂಡಲೇ ರೈತರಿಗೆ ನೀಡಲಾಗುವುದು. ಆಧಾರ್ ನಂಬರ್, ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ರೈತರಿಗೆ ಮಾತ್ರ ಈ ಹಣ ಸಂದಾಯವಾಗಲಿದೆ ಎಂದರು.


 ಕಾರ್ಯದರ್ಶಿ ಉಮಾಶಂಕರ್ ಪ್ರತಿಕ್ರಿಯಿಸಿ, ರಾಜ್ಯ ಸರಕಾರದಿಂದ 800ರಿಂದ 900 ಕೋಟಿ ರೂ. ಬಿಡುಗಡೆಯಾಗಿದೆ. ಸದ್ಯದಲ್ಲೇ ಎಲ್ಲ ಇಲಾಖೆಗಳಿಗೆ ತಲುಪಲಿದ್ದು, ತಲುಪಿದ ಕೂಡಲೇ ಫಲಾನುಭವಿ ರೈತರಿಗೆ ತಲುಪಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಜಿಲ್ಲೆಯ ಅಧಿಕಾರಿ, ಜಿಪಂ ಉಪಕಾರ್ಯದರ್ಶಿ ಷಡಾಕ್ಷರಪ್ಪ, ಜಿಪಂ ಯೋಜನಾ ನಿರ್ದೇಶಕ ರಂಗಸ್ವಾಮಿ ಮಾತನಾಡಿದರು.ಸಭೆಯಲ್ಲಿ ಜಿಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಸಿಇಒ ಎಸ್. ಅಶ್ವತಿ ಮತ್ತಿತರರಿದ್ದರು. ಯಾವುದಾದರು ಯೋಜನೆಗಳ ಬಗ್ಗೆ ಯಾವುದೇ ಇಲಾಖೆ ಅಧಿಕಾರಿಗಳಿಗೆ ಸರಕಾರದ ಮಟ್ಟದಲ್ಲಿ ಸಮಸ್ಯೆಗಳು ಎದುರಾದಲ್ಲಿ ನನ್ನ ಗಮನಕ್ಕೆ ತಂದರೆ ಕೂಡಲೇ ಬಗೆಹರಿಸುವ ಕಾರ್ಯ ಮಾಡುತ್ತೇನೆ.

ಎಸ್.ಆರ್. ಉಮಾಶಂಕರ್, ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ
ಮಾರ್ಚ್ ಒಳಗೆ ಅನುದಾನವನ್ನು ಸಮರ್ಪಕವಾಗಿ ಬಳಸಿ
ಬರಗಾಲವಿರುವುದರಿಂದ ಈ ಬಾರಿ ವಿವಿಧ ಯೋಜನೆಗಳಿಗೆ ಮತ್ತಷ್ಟು ಅನುದಾನ ಬಿಡುಗಡೆಯಾಗುವ ಸಂಭವವಿದೆ. ಆದ್ದರಿಂದ ಎಲ್ಲ್ಲ ಇಲಾಖೆ ಅಧಿಕಾರಿಗಳು ಮಾರ್ಚ್ ಅಂತ್ಯದೊಳಗೆ ತಮ್ಮ ಇಲಾಖೆಗಳಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿದರೆ, ಮಾರ್ಚ್ ಅಂತ್ಯದಲ್ಲಿ ಮತ್ತಷ್ಟು ಅನುದಾನ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಎಂದು ಉಮಾಶಂಕರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News