ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ
ಶಿಮೊಗ್ಗ, ಜ. 9: ಲೈಂಗಿಕ ದೌರ್ಜನ್ಯದ ವೀಡಿಯೊ ಬಹಿರಂಗಪಡಿಸುವುದಾಗಿ ಬ್ಲ್ಯಾಕ್ಮೇಲ್ ಮಾಡಿ ವಿದ್ಯಾರ್ಥಿನಿ ಯೋರ್ವಳ ಮೇಲೆ ಅತ್ಯಾಚಾರ ನಡೆಸಿ, ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ತಲೆಮರೆಸಿ ಕೊಂಡಿ ರುವ ನಗರದ ಪ್ಯಾರಾ ಮೆಡಿಕಲ್ ಕಾಲೇಜ್‌ವೊಂದರ ವಿದ್ಯಾರ್ಥಿಯು ಇನ್ನೂ ಹಲವು ಯುವತಿಯರನ್ನು ಇದೇ ರೀತಿಯಲ್ಲಿ ಲೈಂಗಿಕ ದೌಜರ್ನ್ಯಕ್ಕೀಡು ಮಾಡಿರುವ ಮಾಹಿತಿಗಳು ಕೇಳಿಬರುತ್ತಿವೆ.
ಇತ್ತೀಚೆಗೆ ನಗರದ ಕೊಠಡಿ ಯೊಂದರಲ್ಲಿ ಬಾಡಿಗೆಗಿದ್ದ ಆರೋಪಿ ಯನ್ನು ಹಿಡಿಯಲು ಪೊಲೀಸರು ಮುಂದಾಗಿದ್ದ ವೇಳೆ ವಿಷಯ ಅರಿತ ಆತ ಅಲ್ಲಿಂದ ಕಾಲ್ಕಿತ್ತಿದ್ದು, ಈ ವೇಳೆ ಆತನ ಕೊಠಡಿಯಲ್ಲಿ ಆಪ್ರಾಪ್ತ ವಯಸ್ಸಿನ ಯುವತಿಯೋರ್ವಳು ಇದ್ದುದ್ದು ಕಂಡುಬಂ ದಿದೆ ಎಂದು ಹೇಳಲಾಗುತ್ತಿದೆ. ಆಪಾದಿತನ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಆತನ ಸುಳಿವು ಪತ್ತೆಯಾಗಿಲ್ಲವೆಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
ವಂಚನೆ?: ಆರೋಪಿಯು ಹಲವು ವಿದ್ಯಾರ್ಥಿನಿಯರನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆಂಬ ಮಾಹಿತಿ ಹರಿದಾಡುತ್ತಿದೆ. ಬಲವಂತವಾಗಿ ಇಲ್ಲವೇ ಅವರ ಮನವೊಲಿಸಿ ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ಅದನ್ನು ಅವರಿಗೆ ಗೊತ್ತಿಲ್ಲದಂತೆ ಚಿತ್ರೀಕರಿಸಿಕೊಳ್ಳುತ್ತಿದ್ದ. ತದನಂತರ ಆ ವೀಡಿಯೊವನ್ನು ಬಹಿರಂಗಗೊಳಿಸುವ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಈತನಿಂದ ವಂಚನೆಗೊಳಗಾದ ಯುವತಿಯರು ಭಯದಿಂದ ಯಾರಿಗೂ ವಿಷಯ ತಿಳಿಸುತ್ತಿರಲಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ ತನ್ನಿಂದ ದೌರ್ಜನ್ಯಕ್ಕೊಳಗಾದ ಯುವತಿಯರ ಮೂಲಕವೇ ಹೊಸ ಯುವತಿಯರ ಪರಿಚಯ ಮಾಡಿಕೊಂಡು ಅವರ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗುವ ತಂತ್ರಗಾರಿಕೆ ಈತನದ್ದಾಗಿತ್ತು ಎನ್ನಲಾಗಿದೆ.