×
Ad

​ ಶಿವಮೊಗ್ಗ: ಗ್ಯಾಸ್ ಗೋದಾಮು ಪಕ್ಕದಲ್ಲಿಯೇ ಶಾಲೆ

Update: 2017-01-10 23:14 IST


ಶಿವಮೊಗ್ಗ, ಜ.10: ಶಿವಮೊಗ್ಗ ನಗರದ ಹೊರವಲಯ ನವುಲೆ ಸಮೀಪದ ಸವಳಂಗ ರಸ್ತೆಯಲ್ಲಿ, ಗ್ಯಾಸ್ ಗೋದಾಮುಗಳ ಸುತ್ತಮುತ್ತಲೇ ಕೆಲ ಖಾಸಗಿ ಶಾಲೆಗಳು ಕಾರ್ಯನಿರ್ವಹಣೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.


ಗ್ಯಾಸ್ ಗೋದಾಮುಗಳ ಸಮೀಪವೇ ಈ ಶಾಲೆಗಳ ಕಾರ್ಯನಿರ್ವಹಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅನುಮತಿ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಮೂಲಕ ಶಾಲಾ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಅಮಾಯಕ ಶಾಲಾ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ. ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಗ್ಯಾಸ್ ಗೋದಾಮುವೊಂದು ಬೆಂಕಿಗೆ ತುತ್ತಾಗಿ ನೂರಾರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಿಸಿದ್ದವು. ಗೋದಾಮು ಸಮೀಪವಿದ್ದ ಹಾಸ್ಟೆಲ್‌ವೊಂದರ ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಈ ಘಟನೆಯಿಂದ ನಗರದ ಪಾಲಕರಲ್ಲಿ ಆತಂಕ ಮನೆ ಮಾಡಿದೆ.

ಈ ಪ್ರದೇಶದ ಒಂದೇ ರಸ್ತೆಯಲ್ಲಿ ಎರಡರಿಂದ ಮೂರು ಗ್ಯಾಸ್ ಸಿಲಿಂಡರ್‌ಗಳ ಗೋದಾಮುಗಳಿವೆ. ಸಾವಿರಾರು ಸಿಲಿಂಡರ್‌ಗಳ ದಾಸ್ತಾನಿದೆ. ಇಂತಹ ಪ್ರದೇಶದಲ್ಲಿ ಶಾಲೆಗಳು ಕಾರ್ಯನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ಅಪಾಯಕಾರಿ ಸಂಗತಿಯಾಗಿದೆ. ಯಾವುದೇ ಅನಾಹುತ ಸಂಭವಿಸುವುದು ಬೇಡ. ಆದರೆ, ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರಿ.

ಶಾಲೆ ತೆರೆಯಲು ಅನುಮತಿ ನೀಡುವ ಮುನ್ನ ಶಿಕ್ಷಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ಮಾಡಬೇಕು. ಇಲ್ಲಿ ಶಾಲೆಗಳಿಗೆ ಅನುಮತಿ ನೀಡುವ ಮುನ್ನ ಸಿಲಿಂಡರ್ ಗೋದಾಮುಗಳಿರುವುದು ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ? ಎಂದು ನಿವಾಸಿಯೋರ್ವರು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಅಪಾಯಕಾರಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಹಾಗೂ ಖಾಸಗಿ ಶಾಲೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಗುರುತಿಸಬೇಕು. ಅಂತಹ ಶಾಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಹಾಗೆಯೇ ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಲ್ಲಿ ಮುಂದಾಗಬೇಕು. ಬೇಕಾಬಿಟ್ಟಿಯಾಗಿ ಶಾಲೆ ನಡೆಸುವ ಆಡಳಿತ ಮಂಡಳಿಯವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಶೆಡ್‌ಗಳಂತಿರುವ ಖಾಸಗಿ ಶಾಲೆಗಳತ್ತ ಜಿಲ್ಲಾಡಳಿತ ಗಮನಹರಿಸಲಿ
ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಹಲವೆಡೆ ಶಿಕ್ಷಣ ಇಲಾಖೆಯ ನಿಯಾಮಾವಳಿಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಕೆಲ ಖಾಸಗಿ ಶಾಲೆಗಳು ಕಾರ್ಯಾಚರಿಸುತ್ತಿವೆ. ಕೆಲವೆಡೆ ಶಾಲಾ ಕಟ್ಟಡಗಳು ಅಪಾಯಕಾರಿ ಸ್ಥಿಲ್ಲಿಯದ್ದರೆ, ಮತ್ತೆ ಕೆಲವೆಡೆ ಶಾಲೆಗಳಿರುವ ಸ್ಥಳಗಳೇ ಅಪಾಯಕಾರಿ ವಲಯಗಳಲ್ಲಿವೆ. ಮತ್ತೆ ಕೆಲವೆಡೆ ಶೆಡ್ ಮಾದರಿಯಲ್ಲಿ ಕಟ್ಟಡಗಳಿದ್ದು, ವಿದ್ಯಾರ್ಥಿಗಳನ್ನು ಕುರಿಮಂದೆಯಂತೆ ತುಂಬಲಾಗುತ್ತಿದೆ.


ಈ ಬಗ್ಗೆ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳಿಗೆ ಸೂಕ್ತ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬುವುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News