×
Ad

ಬೆಳ್ತಂಗಡಿ : ದರ್ಗಾ ವೀಕ್ಷಣೆಗೆ ಬಂದಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

Update: 2017-01-11 17:21 IST

ಬೆಳ್ತಂಗಡಿ, ಜ.11 : ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ಒಬ್ಬರು ಅಪಾಯದಿಂದ ಪಾರಾದ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು ಬಳಿ ಬೆಳ್ತಂಗಡಿ ನದಿಯಲ್ಲಿ ಬುಧವಾರ ಅಪರಾಹ್ನ ನಡೆದಿದೆ. 

ಮೃತಪಟ್ಟವರು ಉಡುಪಿ ಜಿಲ್ಲೆಯ ಫಕೀರನಕಟ್ಟೆ ನಿವಾಸಿಗಳಾದ ರಹೀಮ್(30), ಇತನ ಪತ್ನಿ ರುಬೀನಾ(25), ರುಬಿನಾಳ ತಂಗಿ ಯಾಸಿನ್ (23) ತಮ್ಮ ಸುಬಾನ್ (15) ಎಂಬವರಾಗಿದ್ದು ಅಪಾಯದಿಂದ ಪಾರಾದವರು ರುಬಿನಾರ ತಾಯಿ ಮೈಮುನಾ(55) ಎಂಬವರಾಗಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಪ್ರಸಿದ್ದ  ಪ್ರವಾಸೀ ತಾಣ ನಡ ಗ್ರಾಮದ ಗಡಾಯಿಕಲ್ಲು(ಜಮಲಾಬಾದ್ ಕೋಟೆ) ಹಾಗೂ ಇಲ್ಲಿನ ದರ್ಗಾ ವೀಕ್ಷಿಸಿ ನಂತರ ಅದರ ಬಳಿ ಇರುವ ಬೆಳ್ತಂಗಡಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು.  ನಡ ಗ್ರಾಮದ ಮಂಜೊಟ್ಟಿಯಿಂದ ಜಮಲಾಬಾದ್ ಕೋಟೆಗೆ ಸಂಪರ್ಕಿಸುವ ರಸ್ತೆ ಮಧ್ಯದಲ್ಲೆ ಸೇತುವೆ ಇದ್ದು , ಅಲ್ಲಿ ಕಾರು ನಿಲ್ಲಿಸಿ ಬೆಳ್ತಂಗಡಿ ನದಿಯಲ್ಲಿನ ನೀರಿನ ಗುಂಡಿಗೆ ಸ್ನಾನ ಮಾಡಲು ಇಳಿದಿದ್ದಾರೆ.

ಇದೇ ವೇಳೆ ಮಧ್ಯಾಹ್ನ ಸುಮಾರು 2ಗಂಟೆಯ ವೇಳೆಗೆ ಸಾರ್ವಜನಿಕರು ಇವರನ್ನು ನೋಡಿದ್ದು ನಂತರ ಸ್ವಲ್ಪ ಸಮಯದ ಬಳಿಕ ಸಮೀಪ ಇರುವ ತೋಟದಲ್ಲಿ ನೀರು ಹಾಕುತ್ತಿದ್ದ ಸ್ಥಳೀಯರಿಗೆ ಬೊಬ್ಬೆ ಹಾಕುವುದನ್ನು ಕೇಳಿದ್ದು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ನೋಡಿದಾಗ ಮಹಿಳೆಯೋರ್ವಳು ಮುಳುಗುತ್ತಿರುವ ದೃಶ್ಯ ಕಂಡುಬಂದಿದ್ದು ,  ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಸಾರ್ವಜನಿಕಿರು ಸ್ಥಳಕ್ಕೆ ಬಂದಿದ್ದು ಈಕೆಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ .   ತಕ್ಷಣ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಕುಳಿತಿದ್ದ ಇವರದ್ದೇ ಕುಟುಂಬದ ಸದಸ್ಯೆ ಸಾಹಿನಾ  ಇವರು ನೀಡಿದ ಮಾಹಿತಿಯಂತೆ ಇನ್ನುಳಿದ ನಾಲ್ವರು  ನೀರಿನೊಳಗಿದ್ದಾರೆ ಎಂಬ ವಿಚಾರ ತಿಳಿದು ಸ್ಥಳೀಯರು ಮುಳುಗು ತಜ್ಞರ ನೆರವಿನೊಂದಿಗೆ ನೀರಿನಲ್ಲಿ ಹುಡುಕಾಡಿದ್ದು ನಾಲ್ವರ ಮೃತದೇಹಗಳು ನದಿಯಲ್ಲಿ  ಪತ್ತೆಯಾಗಿದೆ.

ಸಣ್ಣ ಮಕ್ಕಳಿದ್ದ ಕಾರಣದಿಂದಾಗಿ ಮೈಮುನಾಳ ಕಿರಿಯ ಮಗಳು ಸಾಹಿನಾ ಮತ್ತು ರುಬಿನಾಳ ಒಂದು ವರ್ಷದ ಮಗು, ಮಕ್ಕಳಾದ ಸೈಮ್ (4) ಮತ್ತು ಸುಹೈಲ್(3) ಅವರು ಕಾರಿನಲ್ಲಿಯೇ ಕುಳಿತಿದ್ದರು . ತನ್ನ ಕುಟುಂಬದವರು ನೀರಿನಲ್ಲಿ ಮುಳುಗಿದ ವಿಚಾರ ಇವರಿಗೆ ಮೊದಲು ತಿಳಿದೇ ಇರಲಿಲ್ಲ . ಕಾರಿನಲ್ಲಿಯೇ ಕುಳಿತ ಕಾರಣ ಇವರು ಬದುಕಿ ಉಳಿದಂತಾಗಿದೆ.

ನದಿಯಲ್ಲಿ ಈ ಪ್ರದೇಶದಲ್ಲಿ ಆಳವಿರುವ ಗುಂಡಿಯಿದೆ . ಇದರ ಅರಿವಿಲ್ಲದೆ ಈಜು ಬಾರದ ಇವರು ಇಲ್ಲಿ ಸ್ನಾನಕ್ಕೆ ಇಳಿದಿದ್ದರು. ನೀರಿನಲ್ಲಿ ಆಟವಾಡುತ್ತಾ ಸುಬಾನ್ ಹೇಚ್ಚು ನೀರಿರುವ ಕಡೆಗೆ ಹೋಗಿದ್ದು ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ಇತರರು ಆತನನ್ನು ಬದುಕಿಸಲು ಮುಂದಾಗಿದ್ದಾರೆ . ಈ ಸಂದರ್ಭ ಇವರು ಒಬ್ಬೊಬ್ಬರಾಗಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ .  ಇವರು ಯಾರಿಗೂ ಸರಿಯಾಗಿ ಈಜು ಬಾರದಿದ್ದ ಕಾರಣದಿಂದಾಗಿ ನೀರು ಹೆಚ್ಚು ಆಳವಿರದಿದ್ದರೂ ,   ಎಲ್ಲರೂ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತ ಪಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಎಸ್.ಐ.ರವಿ, ತಹಶೀಲ್ದಾರರು ತಿಪ್ಪೇ ಸ್ವಾಮೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News