ಹೆಂಡತಿಯನ್ನೆ ಕೊಲೆ ಮಾಡಿ ಗಂಡ ಪರಾರಿ
ಹಾಸನ , ಜ.11 : ಗಂಡನು ಜಗಳ ಮಾಡಿ ಹೆಂಡತಿಯನ್ನೆ ಕೊಲೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ದುದ್ದ ಹೋಬಳಿ ಜೋಡಿಕೃಷ್ಣಪುರ ಗ್ರಾಮದ ನಿವಾಸಿ ಬಾಬು ಪ್ರಸಾದ್ ಎಂಬುವನೆ ಕುಡಿದು ಬಂದು ಜಗಳ ಮಾಡಿ ಹೆಂಡತಿ ಆಶಾ (28) ಎಂಬುವರನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾದವನು.
ಕಳೆದ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಇವರಿಗೆ ಒಬ್ಬ ಮಗನಿದ್ದನು. 8 ವರ್ಷದಿಂದ ಸಂತೋಷವಾಗಿಯೇ ಜೀವನ ಸಾಗಿಸಿದ ಇವರು ಕಳೆದ ಒಂದು ವರ್ಷಗಳಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆಗಾಗ್ಗೆ ಜಗಳ ನಡೆಯುತ್ತಿತ್ತು. ಜೊತೆಗೆ ಅತ್ತೆ-ಮಾವನಿಗೂ ಆಶಾಳನ್ನು ಕಂಡರೆ ಆಗುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಪೊಲೀಸ್ ಮೆಟ್ಟಿಲು ಕೂಡ ಹತ್ತಿ , ಆಶಾ ಇವಳು ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಸ್ಪಂದನ ವೇದಿಕೆಗೆ ಸೊಸೆ ವಿರುದ್ಧ ದೂರನ್ನು ಗಂಡನಾದ ಬಾಬು ಹಾಗೂ ಆತನ ತಂದೆ ತಾಯಿ ನೀಡಿದ್ದರು.
ಮಂಗಳವಾರ ರಾತ್ರಿ 12 ಗಂಟೆಯ ಸಮಯದಲ್ಲಿ ಇವರಿಬ್ಬರ ನಡುವೆ ಮಾತಿನ ವಾಗ್ವಾದ ಉಂಟಾಗಿದೆ. ಆಕ್ರೋಶಗೊಂಡ ಬಾಬು ಪ್ರಸಾದ್ ಇಸ್ತ್ರಿಪೆಟ್ಟಿಗೆಯನ್ನು ಬಿಸಿ ಆದ ಮೇಲೆ ಆಕೆಯ ತಲೆಗೆ ಹೊಡೆದು, ಮುಖ ಹಾಗೂ ಮೈಗಳನ್ನು ಸುಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಸಿಕ್ಕ ಪಾತ್ರೆ ಇತರೆಯಿಂದ ಹೊಡೆದು ನಂತರ ಮುಖಕ್ಕೆ ದಿಂಬು ಹಾಕಿ ಉಸಿರುಕಟ್ಟಿ ಸಾಯಿಸಲಾಗಿದೆ ಎಂಬುದು ಸ್ಥಳದಲ್ಲಿದ್ದ ಸಾಕ್ಷಿಗಳಿಂದ ತಿಳಿದು ಬಂದಿದೆ.
ಇಬ್ಬರೂ ಜಗಳ ಆಡುವಾಗ ಪಕ್ಕದಲ್ಲೆ ವಾಸವಾಗಿದ್ದ ಅತ್ತೆ-ಮಾವ ಬಾಗಿಲು ಬಡಿದಾಗ ಆತ ನಿಮಗೂ ಹೊಡೆಯುವುದಾಗಿ ಹೇಳಿ ಬಾಗಿಲು ಚಿಲಕ ಹಾಕಿಕೊಂಡು ಕೊಲೆ ಮಾಡಿದ್ದಾನೆ ಎಂದು ಇದೇ ವೇಳೆ ದೂರಿದರು. ಎರಡನೇ ತರಗತಿ ಓದುತ್ತಿರುವ ಈತನ ಮಗನನ್ನು ಕೆಲ ತಿಂಗಳಿಂದ ಶಾಲೆಯನ್ನು ಕೂಡ ಬಿಡಿಸಿ ಮನೆಯಲ್ಲಿ ಇಟ್ಟುಕೊಂಡಿದ್ದರು.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಡಿವೈಎಸ್ಪಿ, ಗ್ರಾಮಾಂತರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಕೊಲೆಯ ಬಗ್ಗೆ ಕುಟುಂಬದಿಂದ ವಿವರ ಪಡೆದರು.
ಬಾಬುನ ತಂದೆ-ತಾಯಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.