32.23 ಕೋ.ರೂ. ವೆಚ್ಚದಲ್ಲಿ 133 ಸರಕಾರಿ ಸಿಟಿ ಬಸ್ ಖರೀದಿ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಅನುಮೋದನೆ
ಶಿವಮೊಗ್ಗ, ಜ. 11: ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ, ಶಿವಮೊಗ್ಗ ನಗರಕ್ಕೆ ಹೊಸ ಮಿನಿ ಸಿಟಿ ಬಸ್‌ಗಳ ಖರೀದಿಗೆ ಹಾಗೂ ಹೊರವಲಯ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಾರಾಗೃಹವನ್ನು ಕೇಂದ್ರ ಬಂದಿಖಾನೆಯಾಗಿ ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ, ತುಮಕೂರು, ಮೈಸೂರು ಹಾಗೂ ಇತರೆ ನಗರಗಳಲ್ಲಿ ನಗರ ಸಾರಿಗೆ ಉದ್ದೇಶಕ್ಕೆ 133 ಮಿನಿ ಬಸ್‌ಗಳನ್ನು 32.23 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮತಿ ಸಿಕ್ಕಿದೆ. ಬಸ್‌ಗಳ ಖರೀದಿಗೆ ಕೇಂದ್ರ ಸರಕಾರ 19.34 ಕೋಟಿ ರೂ. ನೀಡಲಿದ್ದು, ರಾಜ್ಯ ಸರಕಾರ 9.64 ಕೋಟಿ ರೂ. ನೀಡಲಿದೆ.
ಶಿವಮೊಗ್ಗ ನಗರದಲ್ಲಿ ಕೇಂದ್ರ ಸರಕಾರವು ಜೆನ್ ನರ್ಮ್ ಯೋಜನೆಯಡಿ 65 ಸರಕಾರಿ ಸಿಟಿ ಬಸ್ ಓಡಿಸಲು ಅನುಮತಿ ನೀಡಿದೆ. ಈಗಾಗಲೇ 20 ಬಸ್‌ಗಳ ಸಂಚಾರ ಆರಂಭವಾಗಿದೆ. ಬಾಕಿ 45 ಬಸ್‌ಗಳ ಸಂಚಾರ ಇನ್ನಷ್ಟೆ ಆರಂಭವಾಗಬೇಕಾಗಿದೆ.
ಾಜ್ಯ ಸರಕಾರವು ಹೊಸ ನಗರ ಸಾರಿಗೆ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿರುವುದರಿಂದ, ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಮತ್ತಷ್ಟು ಹೊಸ ಸರಕಾರಿ ಸಿಟಿ ಬಸ್‌ಗಳು ಓಡಾಡುವ ಸಾಧ್ಯತೆಯಿದೆ. ಇದರಿಂದ ನಗರದ ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗಲಿದೆ. ಹಾಲಿ ನಗರದಲ್ಲಿರುವ ಕಾರಾಗೃಹವು ವಿಚಾರಣಾಧೀನ ಬಂದಿಖಾನೆಯಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿ ಹೊಸ ಕಾರಾಗೃಹ ನಿರ್ಮಾಣ ಮಾಲಾಗುತ್ತಿದ್ದು, ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದೆ. ಈ ನೂತನ ಕಾರಾಗೃಹವನ್ನು ಕೇಂದ್ರ ಕಾರಾಗೃಹವಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನೂತನ ಕಾರಾಗೃಹದಲ್ಲಿ 100 ಮಹಿಳಾ ಹಾಗೂ 500 ಪುರುಷ ಸಜಾ ಬಂದಿಗಳನ್ನು ಇರಿಸಲು ಅವಕಾಶವಾಗುವಂತೆ ಶಿವಮೊಗ್ಗದ ನೂತನ ಕಾರಾಗೃಹವನ್ನು ಕೇಂದ್ರ ಕಾರಾಗೃಹವಾಗಿ ಮೇಲ್ದರ್ಜೆಗೇರಿಸಲು ಸರಕಾರದಿಂದ ಅಧಿಕೃತವಾಗಿ ಅನುಮತಿ ಸಿಕ್ಕಂತಾಗಿದೆ.
ಕೆಎಸ್ಸಾರ್ಟಿಸಿಗೆ ಉಚಿತ ಭೂಮಿ
ನಗರದ ಸಂತೆಕಡೂರು ಗ್ರಾಮದಲ್ಲಿ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಕ್ಕೆ ಜಿಲ್ಲಾಡಳಿತವು ದರ ನಿಗದಿ ಮಾಡಿ ಕೆಎಸ್ಸಾರ್ಟಿಸಿಗೆ ಮಂಜೂರು ಮಾಡಿತ್ತು. ಉಚಿತವಾಗಿ ಭೂಮಿ ನೀಡುವಂತೆ ಕೆಎಸ್ಸಾರ್ಟಿಸಿಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಇದು ಚರ್ಚೆಯಾಗಿ ಸರಕಾರಿ ಸಿಟಿ ಬಸ್ ಡಿಪೋ ನಿರ್ಮಾಣಕ್ಕೆ ಉಚಿತವಾಗಿ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪಾರ್ಕ್ ನಿರ್ಮಿಸಲು ಸಾರ್ವಜನಿಕರ ಆಗ್ರಹ
ನೂತನ ಕಾರಾಗೃಹ ಕಾರ್ಯಾರಂಭಗೊಂಡ ನಂತರ ನಗರದ ಹೃದಯ ಭಾಗದಲ್ಲಿರುವ ಹಳೆಯ ಕಾರಾಗೃಹ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕೆಂದು ಸ್ಥಳೀಯ ಸಾರ್ವಜನಿಕರ ಒತ್ತಾಯವಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಈ ಪ್ರದೇಶ ಅಭಿವೃದ್ಧಿಪಡಿಸಬೇಕೆಂಬ ಯೋಜನೆಯನ್ನು ಈ ಹಿಂದೆ ಜಿಲ್ಲಾಡಳಿತ ರೂಪಿಸಿತ್ತು. ಈ ಬಗ್ಗೆ ರಾಜ್ಯ ಸರಕಾರ ಇನ್ನಷ್ಟೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.