ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಗೋಡೌನ್ ಪಕ್ಕದಲ್ಲಿ ಖಾಸಗಿ ಶಾಲೆ
ಡಿಸಿ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ
ಶಿವಮೊಗ್ಗ, ಜ.11: ನಗರದ ಹೊರವಲಯ ನವುಲೆ ಬಡಾವಣೆಯ ಸವಳಂಗ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಗೋಡೌನ್‌ಗಳ ಸುತ್ತಮುತ್ತಲೇ ಹಲವು ಖಾಸಗಿ ಶಾಲೆಗಳು ಕಾರ್ಯನಿರ್ವಹಣೆ ಮಾಡುತ್ತಿರುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಶಿಕ್ಷಣ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ಮಾಹಿತಿ ನೀಡಿವೆ.
ಗ್ಯಾಸ್ ಸಿಲಿಂಡರ್ ಗೋಡೌನ್‌ಗಳ ಸುತ್ತಮುತ್ತ ಖಾಸಗಿ ಶಾಲೆಗಳ ಕಾರ್ಯನಿರ್ವಹಣೆಗೆ ಕಾನೂನುಬಾಹಿರವಾಗಿ ಅನುಮತಿ ನೀಡಲಾಗಿದೆ ಎಂಬ ವಿಷಯದ ಕುರಿತಂತೆ ಬುಧವಾರ ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವ ಬಗ್ಗೆ ಸ್ಥಳೀಯ ನಿವಾಸಿಗಳು ವ್ಯಾಪಕ ಆಕ್ರೊಶ ವ್ಯಕ್ತಪಡಿಸಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ ಜಿಲ್ಲಾಧಿಕಾರಿ, ಎರಡು ಇಲಾಖೆಗಳ ಅಧಿಕಾರಿಗಳಿಗೆ ಖುದ್ದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಡಿ.ಸಿ. ಕಚೇರಿಯ ಮೂಲಗಳು ಮಾಹಿತಿ ನೀಡಿವೆ.
ಡಿ.ಸಿ. ಸೂಚನೆಯಂತೆ ಆಹಾರ ಇಲಾಖೆಯ ಅಧಿಕಾರಿಗಳ ತಂಡವು ಗ್ಯಾಸ್ ಗೋಡೌನ್‌ಗಳಿರುವ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ ಎಂದು ಆ ಇಲಾಖೆಯ ಮೂಲಗಳು ತಿಳಿಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ಈ ಬಗ್ಗೆ ಪ್ರಕಟವಾದ ವರದಿ ಗಮನಿಸಿದ ಜಿಲ್ಲಾಡಳಿತವು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿರುವುದಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.