9 ಮಂದಿ ಅಂತರ್ ಜಿಲ್ಲಾ ಕಳ್ಳರ ಸೆರೆ 13.70 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ
ಶಿವಮೊಗ್ಗ, ಜ. 11: ಶಿಕಾರಿಪುರ ಪೊಲೀಸ್ ಉಪ ವಿಭಾಗದಲ್ಲಿ ನಾಲ್ಕು ತಿಂಗಳಿನಿಂದ ಮನೆ, ದೇವಸ್ಥಾನ, ವಾಹನ ಕಳ್ಳತನ ಮಾಡುತ್ತಿದ್ದ 9 ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿರುವ ಶಿಕಾರಿಪುರ ಪೊಲೀಸರು ಸರಿಸುಮಾರು 13.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ದಾದಾಪೀರ್ ಅಲಿಯಾಸ್ ಸೈಯದ್, ಪರ್ವೀಸ್ ಅಹ್ಮದ್, ಜಿಯಾ ಅಲಿಯಾಸ್ ಜಿಯಾಉಲ್ಲಾ, ಝುಬೇರ್ ಅಹ್ಮದ್, ಇನಾಯತ್ ಉಲ್ಲಾ, ಇರ್ಫಾನ್ ಅಹ್ಮದ್, ಹಮೀದ್ ಅಲಿಯಾಸ್ ಅಬ್ದುಲ್ ಹಮೀದ್, ಫಾರೂಕ್ ಉಲ್ಲಾ ಮತ್ತು ಕರಿಯಾ ಬಿನ್ ಭೀಮಪ್ಪ ಬಂಧಿತ ಆರೋಪಿಗಳು.
ಆರೋಪಿಗಳು ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳ ವಿವಿಧೆಡೆ ಕಳವು ಕೃತ್ಯದಲ್ಲಿ ಭಾಗಿಾಗಿದ್ದ ವಿವರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 13 ಮನೆ ಕಳ್ಳತನ, 26 ದೇವಸ್ಥಾನ ಹಾಗೂ ಬೈಕ್‌ವೊಂದನ್ನು ಆರೋಪಿಗಳು ಕಳವು ಮಾಡಿದ್ದು ತಿಳಿದುಬಂದಿದೆ.
ಒಟ್ಟಾರೆ 8.70 ಲಕ್ಷ ರೂ. ಮೌಲ್ಯದ ಬಂಗಾರ, 1.70 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭಣಗಳು, ಒಂದು ಬೈಕ್, ಕೃತ್ಯಕ್ಕೆ ಬಳಸಿದ 2 ಮಾರುತಿ ಓಮ್ನಿ, 2 ಮೋಟಾರ್ ಸೈಕಲ್ ಮತ್ತು 3 ಗೃಹೋಪಯೋಗಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.
ಆರೋಪಿಗಳು ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕಾರಿಪುರ ಡಿಎಸ್ಪಿ ಸುಧಾಕರ ನಾಯ್ಕ, ಸಿಪಿಐ ಹರೀಶ್ ಕೆ. ಪಟೇಲ್, ಶಿರಾಳಕೊಪ್ಪ ಪಿಎಸ್ಸೈ ಗುರುರಾಜ ಮೈಲಾರ, ಇಲಾಖೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.