ಪೊಲೀಸ್ ಪೇದೆಯಿಂದ ಜಾತಿ ನಿಂದನೆ: ಆರೋಪ
ಮೂಡಿಗೆರೆ, ಜ.11: ಮಸೀದಿಯೊಂದರ ಪದಾಧಿಕಾರಿಗಳಿಗೆ ಅವಾಚ್ಯ ಶಗಳಿಂದ ಜಾತಿ ನಿಂದನೆಗೊಳಿಸಿರುವ ಪೊಲೀಸ್ ಪೇದೆಯನ್ನು ತಕ್ಷಣ ಅಮಾನತುಗೊಳಿಸುವಂತೆ ಒತ್ತಾಯಿಸಿ ಮುಸ್ಲಿಂ ಮುಖಂಡರು ಮೂಡಿಗೆರೆ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಅಣಜೂರು ಮಸೀದಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಬರುತ್ತಿರುವ ಪೇದೆ ಕುಮಾರ್ ಎಂಬವರು ಮಸೀದಿ ಆವರಣದಲ್ಲಿ ಕಟ್ಟಿರುವ ಕೆಲವು ಧಾರ್ಮಿಕ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ತಾಕೀತು ಮಾಡಿದ್ದಾರೆ.
ಒಂದು ತಿಂಗಳಲ್ಲಿ ಈದ್ ಮೀಲಾದ್ ಹಾಗೂ ರಾತೀಬ್ ಕಾರ್ಯಕ್ರಮ ಮುಗಿದ ಬಳಿಕ ತೆರವುಗೊಳಿಸುವುದಾಗಿ ಮಸೀದಿ ಕಮೀಟಿಯ ಪದಾಧಿಕಾರಿಗಳು ವಿನಂತಿಸಿದ್ದರು. ಇದರಿಂದ ಕುಪಿತನಾದ ಪೇದೆ ಕುಮಾರ್, ಪದಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಧರ್ಮ ನಿಂದನೆ ಮಾಡಿದ್ದಾರೆ.
ರಾತ್ರಿ 11ಗಂಟೆ ನಂತರವೂ ಪೇದೆ ಕುಮಾರ್‌ಮೊಬೈಲ್ ಮೂಲಕ ಮಸೀದಿಯ ಅಧ್ಯಕ್ಷರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಮುಸ್ಲಿಮರು, ಈತನ ಉಪಟಳದಿಂದ ನಾವು ರೋಸಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಈ ಪೇದೆಯನ್ನು ಗೋಣಿಬೀಡು ಠಾಣೆಯಿಂದ ವರ್ಗಾವಣೆಗೊಳಿಸಬೇಕು. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವೃತ್ತ ನಿರೀಕ್ಷಕರಿಗೆ ದೂರು ನೀಡಿವ ವೇಳೆ ಕರ್ನಾಟಕ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್, ಗ್ರಾಪಂ ಸದಸ್ಯ ಅಬ್ದುಲ್ ಕರೀಂ, ಮಸೀದಿ ಅಧ್ಯಕ್ಷ ಅಬ್ದುಲ್ ಕರೀಮ್, ಕಾರ್ಯದರ್ಶಿ ಹನೀಫ್, ಮುಹಮ್ಮದ್, ಹಂಝ, ಎ.ಎಂ.ಸಲೀಂ, ಹಾಜಬ್ಬ, ಲತೀಫ್, ಹನೀಫ್, ಅಶ್ರಫ್, ರಿಯಾಝ್, ಎ.ಎ.ಸಲೀಂ, ಶರೀಫ್ ಮತ್ತಿತರರಿದ್ದರು.