×
Ad

ಹೋರಿ ಬೆದರಿಸುವ ಸ್ಪರ್ಧೆಗೆ ನಿರ್ಬಂಧ ಆಯೋಜಿಸಿದರೆ ಕಠಿಣ ಕ್ರಮ: ಎಸ್ಪಿ ಎಚ್ಚರಿಕೆ

Update: 2017-01-11 23:13 IST

ಶಿವಮೊಗ್ಗ, ಜ. 11: ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಹಾಗೂ ನಾನಾ ರೀತಿಯ ಅನಾಹುತಗಳಿಗೆ ಸಾಕ್ಷಿಯಾಗುತ್ತಿರುವ ಜಿಲ್ಲೆಯ ವಿವಿಧೆಡೆ ಆಯೋಜಿಸುವ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅನುಮತಿ ನೀಡದಿರಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ. ಇನ್ನು ಮುಂದೆ ಈ ರೀತಿಯ ಸ್ಪರ್ಧೆ ಆಯೋಜಿಸದಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಸಮೀಪದ ತಲ್ಲೂರು ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಈರ್ವರು ಯುವಕರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಇತ್ತೀಚೆಗೆ ಈ ಸ್ಪರ್ಧೆಗಳಲ್ಲಿ ಅನಾಹುತಗಳು ಹೆಚ್ಚಾಗಿದ್ದವು. ಕೆಲವರು ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದ ಅನುಮತಿಯಿಲ್ಲದೆ ಸ್ಪರ್ಧೆ ಆಯೋಜಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದ ಸ್ಪರ್ಧೆ ನಿರ್ಬಂಧಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಈ ನಡುವೆ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಮಾತನಾಡಿ, ಹೋರಿ ಬೆದರಿಸುವ ಸ್ಪರ್ಧೆಗೆ ಇನ್ನು ಮುಂದೆ ಅನುಮತಿ ನೀಡುವುದಿಲ್ಲ. ಯಾರೂ ಕೂಡ ಇಂತಹ ಸ್ಪರ್ಧೆಗಳನ್ನು ಆಯೋಜಿಸಬಾರದು.

ಹಾಗೆಯೇ ಸ್ಪರ್ಧೆಗಳಲ್ಲಿ ಬಹುಮಾನ ಘೋಷಿಸಬಾರದು. ಈ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ಕರೆ ಮಾಡುವ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಅವರ ಅಹವಾಲು ಆಲಿಸಬೇಕು. ಕರೆ ಸ್ವೀಕರಿಸದೆ ನಿರ್ಲಕ್ಷ್ಯವಹಿಸುವವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಟೊ ಚಾಲಕರು ಕಡ್ಡಾಯವಾಗಿ ಮೀಟರ್ ಹಾಕಿ ಆಟೊ ಓಡಿಸಬೇಕು. ನಿಗದಿಪಡಿಸಿರುವ ದರ ಮಾತ್ರ ಪಡೆಯಬೇಕು. ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ ಜರಗಿಸಲಾಗುವುದು.

ಇಷ್ಟರಲ್ಲಿಯೇ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಲಾಖೆಯಿಂದ ಹೆಲ್ಪ್‌ಲೈನ್‌ವೊಂದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್‌ಉಪಸ್ಥಿತರಿದ್ದರು.
‘ಜಿಲ್ಲೆಯಲ್ಲಿ ಓಬವ್ವ ಪಡೆ ಸಕ್ರಿಯ’
 ಬೀದಿ ಕಾಮಣ್ಣರ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ಈ ಹಿಂದೆ ಜಾರಿಗೆ ತಂದಿದ್ದ ‘ಓಬವ್ವ ಪಡೆ’ ಇತ್ತೀಚೆಗೆ ಸಕ್ರಿಯವಾಗಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಸ್ಪಿ ಅಭಿನವ್ ಖರೆಯವರು, ‘ಓಬವ್ವ ಪಡೆ ಸೈಲೆಂಟಾಗಿಲ್ಲ. ಕೆಲಸ ಮಾಡುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಓಬವ್ವ ಪಡೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಬ್ ಇನ್‌ಸ್ಪೆೆಕ್ಟರ್ ಅನಿತಾ ಕುಮಾರಿಯವರು ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಈ ಪಡೆಯ ನೇತೃತ್ವವನ್ನು ಸಬ್ ಇನ್‌ಸ್ಪೆಕ್ಟರ್ ಶರಾವತಿಯವರು ವಹಿಸಿಕೊಂಡಿದ್ದಾರೆ. ಎಂದಿನಂತೆ ಈ ಪಡೆಯು ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ.

ಅಲರ್ಟ್ ಆಗಿರುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News