ಕಾಡಾನೆಗಳ ಕಾಳಗದಲ್ಲಿ ಒಂದು ಆನೆ ಸಾವು

Update: 2017-01-11 17:47 GMT

ಮಡಿಕೇರಿ, ಜ.11: ಕಾಡಾನೆಗಳೆರಡು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಸಲಗವೊಂದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ವಡ್ಡರಳ್ಳಿ ಬಳಿಯ ವುಡ್ ಲ್ಯಾಂಡ್ ಎಸ್ಟೇಟಿನಲ್ಲಿ ನಡೆದಿದೆ.


ಕಾಡಾನೆಗಳ ಕಾದಾಟ ನಡೆಯುವ ಸಂದರ್ಭದಲ್ಲಿ ಒಂದು ಸಲಗವು ಇನ್ನೊಂದು ಸಲಗವನ್ನು ತನ್ನ ದಂತದಿಂದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆ ಸೇರಿದಂತೆ ಶರೀರಕ್ಕೆ ತಿವಿದುದಲ್ಲದೆ ನಾಲಿಗೆಯನ್ನು ತುಂಡರಿಸಿದೆ. ತೋಟದ ಬಳಿಯ ಕೆರೆಯೊಂದರ ಬದಿಯಲ್ಲಿ ಇರುವ ಮರವೊಂದಕ್ಕೆ ಕಾದಾಟ ಸಂದರ್ಭದಲ್ಲಿ ಹಾನಿಯಾಗಿದೆ.


ರಾತ್ರಿ ನಡೆದ ಕಾದಾಟದಲ್ಲಿ ಕಾಡಾನೆಯು ಮತ್ತೊಂದು ಕಾಡಾನೆಯನ್ನು ಗಾಯಗೊಳಿಸಿ ದೂಡಿದ ಪರಿಣಾಮ ತಗ್ಗು ಪ್ರದೇಶಕ್ಕೆ ಬಿದ್ದ ಆನೆ ರಾತ್ರಿ ಪೂರ್ತಿ ರೋಧಿಸಿದೆ.
ಬೆಳಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಯು ಬಾಯಿಗೆ ನೀರು ಸುರಿದರೂ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಡಾನೆ ಚೇತರಿಸಿಕೊಳ್ಳಲು ಸಾಧ್ಯವಾಗದೆ ಕೊನೆಗೂ ಸಾವನ್ನಪ್ಪಿತು. ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯಾಧಿಕಾರಿ ಡಾ. ಉಮಾ ಶಂಕರ್ ನಡೆಸಿದರು. ಬಳಿಕ ಆನೆಯ ಎರಡೂ ದಂತಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿತು.

ಸ್ಥಳಕ್ಕೆ ಡಿಎಫ್‌ಒ. ಸೂರ್ಯ ಸೇನ್, ವಲಯ ಅರಣ್ಯಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News