ಮಂಗಳೂರಿನ ವರುಣ್ ಟ್ರಾವೆಲ್‌ತಂಡದ ಪಾಲಾದ ಸುಲ್ತಾನ್‌ಟ್ರೋಫಿ

Update: 2017-01-11 17:50 GMT

ಭಟ್ಕಳ, ಡಿ.11: ಕಳೆದ ಆರು ದಿನಗಳಿಂದ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸುಲ್ತಾನ್ ವೆಲ್ಫೇರ್ ಅಸೋಸಿಯೇಶನ್ ಆಯೋಜಿಸಿದ್ದ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾವಳಿಗೆ ತೆರೆ ಬಿದ್ದಿದ್ದು, ಕಿಕ್ಕಿರಿದು ಸೇರಿದ್ದ ಕಬಡ್ಡಿ ಪ್ರೇಕ್ಷಕರ ನಡುವೆ ಮಂಗಳೂರಿನ ವರುಣ್ ಟ್ರಾವೆಲ್ ತಂಡ ಸ್ಥಳೀಯ ಲಾಯನ್ಸ್ ತಂಡವನ್ನು 22 ಅಂಕಗಳ ಭಾರೀ ಅಂತರದಿಂದ ಪರಾಭವಗೊಳಿಸುವ ಮೂಲಕ ಆಕರ್ಷಕ ಸುಲ್ತಾನ್ ಟ್ರೋಫಿ ಹಾಗೂ 55,555 ರೂ. ನಗದನ್ನು ತನ್ನದಾಗಿಸಿಕೊಂಡಿತು.

ರಾಜ್ಯದ ವಿವಿಧ ಜಿಲ್ಲೆಗಳ 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಮಂಗಳೂರಿನ ವರುಣ್ ಟ್ರಾವೆಲ್, ಭಟ್ಕಳದ ಲಾಯನ್ಸ್, ವೈ.ಎಂ.ಎಸ್.ಎ ಹಾಗೂ ಶಿವಮೊಗ್ಗದ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು.

ಅಂತಿಮ ಸೆಣಸಾಟದಲ್ಲಿ ಮಂಗಳೂರಿನ ವರುಣ್ ತಂಡ ಭಟ್ಕಳದ ಲಾಯನ್ಸ್ ತಂಡವನ್ನು ಭಾರೀ ಅಂಕಗಳ ಅಂತರ ದಿಂದ ಸೋಲಿಸುವುದರ ಮೂಲಕ ವಿಜಯ ಪತಾಕೆಯನ್ನು ಹಾರಿಸಿತು. ಲಾಯನ್ಸ್ ತಂಡ ರನ್ನರ್ ಅಪ್ ಆಗಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿತು. ಪಂದ್ಯಾವಳಿಯಲ್ಲಿ ವರುಣ್ ತಂಡದ ಆಶಿಖ್‌ಗೆ ಪಂದ್ಯಾವಳಿಯ ಉತ್ತಮ ಆಟಗಾರ ಎಂಬ ಬಿರುದನ್ನು ನೀಡಿದರೆ, ವೈಎಂಎಸ್‌ಎ ತಂಡದ ಮುದಸ್ಸಿರ್ ಮುಬಾರಕ್ ಗೆ ಉತ್ತಮ ಕ್ಯಾಚರ್ ಬಿರುದನ್ನು ನೀಡಲಾಯಿತು. ವರುಣ್ ತಂಡದ ವೆಂಕಟೇಶ್ ಉತ್ತಮ ರೈಡರ್ ಎಂಬ ಖ್ಯಾತಿಗೆ ಪಾತ್ರರಾದರು.


  ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ಅಲ್ತಾಫ್ ಖರೂರಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯನ್ನು ಹಸ್ತಾಂತರಿಸುವುದರ ಮೂಲಕ ಕಬಡ್ಡಿಯ ರೋಚಕ ಪ್ರದರ್ಶನಕ್ಕೆ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News