​ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ ಜೈಲು ಶಿಕ್ಷೆ

Update: 2017-01-11 17:57 GMT

ಚಿಕ್ಕಮಗಳೂರು, ಜ.11: ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದೆ.


 2014ರ ಎ.5ರಂದು ಸಂಜೆ ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ಎನ್. ರಾಘವೇಂದ್ರ ತಮ್ಮ ಇಬ್ಬರು ಸಿಬ್ಬಂದಿಯೊಂದಿಗೆ ನಗರದ ಹೊರವಲಯದ ಗಾಲ್ಫ್ ಕ್ಲಬ್‌ಗೆ ಹೋಗುವ ಕ್ರಾಸ್ ರಸ್ತೆಯ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಆರೋಪಿ ಕೆ.ಪಿ. ನಾಗರಾಜ್ ಕೆ.ಎ.31: 3430ರ ಪಿಕ್‌ಅಪ್ ವಾಹನವನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದುದನ್ನು ತಡೆದು ನಿಲ್ಲಿಸಿದರು. ಪರಿಶೀಲನೆ ಮಾಡಿದಾಗ ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಬಂದಿರುವುದು ಪತ್ತೆಯಾಯಿತು.

ಈ ಬಗ್ಗೆ ಸಬ್‌ಇನ್‌ಸ್ಪೆಕ್ಟರ್ ಮೊದಲ ಆರೋಪಿ ನಾಗರಾಜ್‌ನನ್ನು ಕೇಳಿದ್ದಕ್ಕೆ ಆರೋಪಿಯು ಕರ್ತವ್ಯದಲ್ಲಿದ್ದ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಜೊತೆ ವಾಗ್ವಾದಕ್ಕೆ ಇಳಿದು ಕರ್ತವ್ಯಕ್ಕೆ ಅಡಚಣೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳಾದ 1ನೆ ಮತ್ತು 2ನೆ ಆರೋಪಿಗಳು ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿರುತ್ತದೆ ಎಂದು ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ರಾಜು ಅವರು, ಆರೋಪಿಗಳಾದ ಕೆ.ಪಿ. ನಾಗರಾಜ, ಕರುಣಾಕರರಿಗೆ ತಲಾ 3 ತಿಂಗಳುಗಳ ಸಾದಾ ಜೈಲು ಶಿಕ್ಷೆ ಹಾಗೂ ರೂ. 5,000 ದಂಡ ಪಾವತಿಸಲು ಆದೇಶಿಸಿದೆ. ಕೃಷ್ಣಮೂರ್ತಿ ಹಾಗೂ ಶ್ರೀನಿವಾಸರನ್ನು ಆರೋಪದಿಂದ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News