ಪ್ರಧಾನಿ ವಿರುದ್ಧದ ಸಹಾರ-ಬಿರ್ಲಾ ಲಂಚ ಆರೋಪದ ತನಿಖೆಗೆ ಮನವಿ: ಸುಪ್ರೀಂ ಕೋರ್ಟ್ ನಿಂದ ವಜಾ

Update: 2017-01-12 03:28 GMT

ಹೊಸದಿಲ್ಲಿ, ಜ.12: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಲಂಚ ಹಗರಣದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ ರಚಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಸಹಾರ ಹಾಗೂ ಬಿರ್ಲಾ ಉದ್ಯಮಗಳ ಮೇಲೆ ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳಿಗೆ ಪುರಾವೆಯಾಗುವ ಯಾವುದೇ ಮೌಲ್ಯ ಇಲ್ಲ ಎಂಬ ಆಧಾರದಲ್ಲಿ ಈ ನಿರ್ಧಾರ ಕೈಗೊಂಡಿದೆ.

ಈ ಪ್ರಕರಣವು ಕೇವಲ ಬಿಡಿ ಕಾಗದ, ಇ-ಮೇಲ್ ಪ್ರಿಂಟ್‌ಔಟ್‌ಗಳ ಆಧಾರದಲ್ಲಿ ನಿಂತಿದೆ. ಬಹುತೇಕ ಯಾವುದಕ್ಕೂ ಮಹತ್ವ ಇಲ್ಲ. ಇವು ಯಾವುವೂ ಪುರಾವೆಯಾಗಿ ಸ್ವೀಕರಿಸಲು ಯೋಗ್ಯವಲ್ಲ. ಇವುಗಳಿಗೆ ಕಾನೂನಿನ ಪ್ರಕಾರ ಯಾವ ಮೌಲ್ಯವೂ ಇಲ್ಲ. ಆದ್ದರಿಂದ ಸಂವಿಧಾನಾತ್ಮಕ ಕಾರ್ಯನಿರ್ವಾಹಕರ ಮೇಲೆ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲು ಇವು ಸಾಲದು. ಅವರ ಹೆಸರು ಉಲ್ಲೇಖ ಇರುವ, ಆದಾಯ ತೆರಿಗೆ ವಿಲೇವಾರಿ ಆಯೋಗ ತಿದ್ದಿದೆ ಎನ್ನಲಾದ ದಾಖಲೆಗಳು ಸ್ವೀಕಾರಾರ್ಹವಲ್ಲ ಎಂದು ಕೋರ್ಟ್ ಆಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಅಮಿತವ್ ರಾಯ್ ಅವರನ್ನೊಳಗೊಂಡ ಹೊಸ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. "ಉನ್ನತ ಮಟ್ಟದ ಸಂವಿಧಾನಾತ್ಮಕ ಕಾರ್ಯನಿರ್ವಹಿಸುವವರ ಮೇಲೆ ವಿಚಾರಣೆ ಕೈಗೊಳ್ಳಲು ಆಗ್ರಹಿಸಿದಾಗ ಕೋರ್ಟ್ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ತನಿಖೆಗೆ ಆದೇಶಿಸುವ ಮುನ್ನ ಪ್ರಕರಣದಲ್ಲಿ ಯಾವುದೇ ಪ್ರಮುಖ ಪುರಾವೆಯಾಗುವ ದಾಖಲೆಗಳು ಇವೆಯೇ ಎಂದು ಪರಿಶೀಲಿಸಬೇಕು" ಎಂದು ನ್ಯಾಯಪೀಠ ಆಭಿಪ್ರಾಯಪಟ್ಟಿದೆ.

ಕಾಮನ್ ಕಾಸ್ ವಕೀಲ ಪ್ರಶಾಂತ್ ಭೂಷಣ್ ಅವರು, ಆಗ ಭಾರತದ ನಿಯೋಜಿತ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್.ಖೇಹರ್ ಅವರ ಹೆಸರನ್ನು ಪೀಠದಿಂದ ಕೈಬಿಡಬೇಕು. ಏಕೆಂದರೆ ಅವರನ್ನು ಆ ಹುದ್ದೆಗೆ ನೇಮಕ ಮಾಡುವ ಸಂಬಂಧದ ಕಡತ ಪ್ರಧಾನಿ ನೇತೃತ್ವದ ಕಾರ್ಯಾಂಗದ ಬಳಿ ಇದೆ ಎಂದು ವಾದಿಸಿದ್ದ ಹಿನ್ನೆಲೆಯಲ್ಲಿ, ಹೊಸ ನ್ಯಾಯಪೀಠ ರಚಿಸಲಾಗಿತ್ತು.

"ಮೇಲ್ನೋಟಕ್ಕೆ ಕಾಣುವ, ವಿಶ್ವಾಸಾರ್ಹ ಹಾಗೂ ಸ್ವೀಕಾರಾರ್ಹ ಪುರಾವೆ ಇರಬೇಕು. ಇಲ್ಲದಿದ್ದರೆ ಇತರ ಉದ್ದೇಶಗಳಿಗೆ ನ್ಯಾಯವ್ಯವಸ್ಥೆಯನ್ನು ದುರ್ಬಳಕೆ ಮಾಡಿದಂತಾಗುತ್ತದೆ ಎಂದು ಸ್ವಯಂಸೇವಾ ಸಂಸ್ಥೆಯ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.
ಎನ್‌ಜಿಓ ನೀಡಿದ, ಸಹಾರ ಸಮೂಹ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ಡೈರಿಯ ಪುಟಗಳು ಎನ್ನಲಾದ ಬಿಡಿ ಕಾಗದಗಳಲ್ಲಿ ಗುಜರಾತ್ ಸಿಎಂ ಎಂಬಂಥ ಉಲ್ಲೇಖಗಳಿದ್ದು, ಇತರ ರಾಜಕಾರಣಿಗಳ ಹೆಸರೂ ಇದೆ. ಇದು ಎರಡು ಉದ್ಯಮ ಸಂಸ್ಥೆಗಳು ಅಧಿಕೃತವಾಗಿ ನಿರ್ವಹಿಸಿದ ದಿನಚರಿ ಅಲ್ಲ ಎಂದು ನ್ಯಾಯಪೀಠ ತಳ್ಳಿಹಾಕಿದೆ.
                                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News