‘ಕಪ್ಪತ್ತ ಗುಡ್ಡ ಸಂರಕ್ಷಣೆಗೆ ಸಿಎಂ ಮುಂದಾಗಲಿ’
ಗದಗ, ಜ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದು, ಕಪ್ಪತ್ತ ಗುಡ್ಡ ಸಂರಕ್ಷಣೆಯಲ್ಲಿ ಅವರು ಅಸಹಾಯಕರಾಗಿದ್ದಾರೆ ಎಂದು ಗದಗಿನ ಜ.ತೋಂಟದ ಸಿದ್ಧಲಿಂಗ ಸ್ವಾಮಿ ಹೇಳಿದ್ದಾರೆ.
ಗದಗಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ತೋಂಟದ ಶ್ರೀಗಳು, ಕಪ್ಪತ್ತ ಗುಡ್ಡ ವಿಷಯವಾಗಿ ಸಿಎಂ ಮೇಲೆ ಹೈಕಮಾಂಡ್ ಒತ್ತಡವಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಬಲ್ದೋಟಾ ಕಂಪೆನಿ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ ಅವರು, ಬಲ್ದೋಟಾ ಗಣಿ ಕಂಪೆನಿ ಏಜೆಂಟರು ಕಪ್ಪತ್ತಗುಡ್ಡ ರಕ್ಷಣೆಗೆ ಮುಂದಾದವರನ್ನು ಖರೀದಿಸುತ್ತಿದ್ದಾರೆ. ಸ್ವತ: ತನ್ನ ಮಠದ ವ್ಯವಸ್ಥಾಪಕರಿಗೂ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತರಿಗೂ ಹಣದ ಆಮಿಷ ಒಡ್ಡಿದ್ದಾರೆ.
ಲಕ್ಷಾಂತರ ರೂಪಾಯಿ ಹಣದ ಆಮಿಷ ತೋರಿಸಿ ಹೋರಾಟಗಾರರನ್ನು ಖರೀದಿಸಲು ಬಲ್ದೋಟಾ ಕಂಪೆನಿ ಮುಂದಾಗಿದೆ. ತಿಳುವಳಿಕೆ ಇಲ್ಲದವರು ಹಣದ ಆಮಿಷಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕಪ್ಪತ್ತ ಗುಡ್ಡ ಸಂರಕ್ಷಣೆಗೆ ಸಂಬಂಧಿಸಿದಂತೆ ಜ.16 ರಂದು ಜಿಲ್ಲಾಧಿಕಾರಿಗೆ ಸಲ್ಲಿಸುವ ಸಾರ್ವಜನಿಕ ಅಹವಾಲು ಸ್ವೀಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳಲು ಅವರು ಕರೆ ನೀಡಿದರು.
ಕಪ್ಪತ್ತ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ಕಪ್ಪತ್ತ ಗುಡ್ಡದಲ್ಲಿ ಗಣಿಗಾರಿಕೆ ಆರಂಭವಾದರೆ ಸಂಡೂರು ಗುಡ್ಡ ಬರಿದಾಗಿ ಕಪ್ಪತ್ತ ಗುಡ್ಡ ನೆಲಸಮವಾಗುತ್ತದೆ. ಆದ್ದರಿಂದ ಸಂಡೂರು ಗುಡ್ಡದ ಪರಿಸ್ಥಿತಿ ಕಪ್ಪತ್ತ ಗುಡ್ಡಕ್ಕೆ ಬಾರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.