×
Ad

​ಅರ್ಚಕನ ಮನೆಯಲ್ಲಿ ದರೋಡೆ

Update: 2017-01-12 23:17 IST

ಶಿವಮೊಗ್ಗ, ಜ. 12: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ವಶದಲ್ಲಿರುವ ದುರ್ಗಾ ಚೌಡೇಶ್ವರಿ ದೇವಾಲಯದ ಅರ್ಚಕ ಶಿವಕುಮಾರ್ ಅವರ ಮನೆಯಲ್ಲಿ ದರೋಡೆ ನಡೆದಿದ್ದು, ದರೋಡೆಕೋರರು ಯಾರೆಂಬುದು ನಿಗೂಢವಾಗಿ ಪರಿಣಮಿಸಿದೆ. ನಗರದ ಅಚ್ಯುತರಾವ್ ಬಡಾವಣೆಯಲ್ಲಿ ಶಿವಕುಮಾರ್ ಅವರ ಮನೆಯಿದೆ. ಕಳೆದೆರಡು ದಿನಗಳ ಹಿಂದೆ ಸಂಜೆಯ ವೇಳೆ ಕಾರೊಂದರಲ್ಲಿ ಆಗಮಿಸಿದ ದರೋಡೆಕೋರರು ಮನೆಯಲ್ಲಿದ್ದ ಶಿವಕುಮಾರ್ ಅವರ ಅತ್ತೆ ಮಂಜುಳಮ್ಮ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಮಾರಾಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿ, ಸರಿಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಿ ಪರಾರಿಯಾಗಿದ್ದರು.

ಮಂಜುಳಮ್ಮರವರನ್ನು ಕಟ್ಟಿ ಹಾಕಿ ಹಾಗೂ ಹೆಣ್ಣು ಮಕ್ಕಳು ಕೂಗಾಡದಂತೆ ಬಾಯಿಗೆ ಪ್ಲಾಸ್ಟರ್ ಹಾಕಿ ದರೋಡೆಕೋರರು ತೆರಳಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್‌ರವರ ಪತ್ನಿಯೂ ಕಾರ್ಯನಿಮಿತ್ತ ಹೊರ ತೆರಳಿದ್ದರು.

ಅವರು ಮನೆಗೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಇವರ ಮನೆಯಲ್ಲಿ ದರೋಡೆಕೋರರು ಚಿನ್ನಾಭರಣ ದೋಚಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಕೃತ್ಯದಲ್ಲಿ ಶಿವಕುಮಾರ್‌ಗೆ ಪರಿಚಯವಿರುವವರೇ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರವಷ್ಟೆ ದರೋಡೆಕೋರರ ಪೂರ್ವಾಪರ ತಿಳಿದುಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News