ಅಕ್ರಮ ಮರಳು ಸಾಗಾಟ: ಎರಡು ಪ್ರಕರಣ ದಾಖಲು
ಚಿಕ್ಕಮಗಳೂರು, ಜ.12: ಅಕ್ರಮ ಮರಳು ಸಾಗಾಟದ ಸಂಬಂಧ ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಎರಡು ಲಾರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕೆಟ್ ರಸ್ತೆಯಲ್ಲಿ ಬೇಲೂರು ರಸ್ತೆಯಿಂದ ಬರುತ್ತಿದ್ದ ಲಾರಿಯೊಂದನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಚಾಲಕ ಶಿವಕುಮಾರ್ ಮತ್ತು ಲಾರಿ ಮಾಲಕ ಗಿರೀಶ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಅಕ್ರಮ ಮರಳನ್ನು ಬೇಲೂರು ತಾಲೂಕಿನ ಯಮಸಂದಿ ಗ್ರಾಮದ ಬಳಿ ಇರುವ ಯಗಚಿ ನದಿಯಿಂದ ಅಕ್ರಮವಾಗಿ ತುಂಬಿಕೊಂಡು ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಗ್ರವಳ್ಳಿ ಹಳ್ಳದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಯೊಂದನ್ನು ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮರಳು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಲಾರಿಯಲ್ಲಿದ್ದ ಅಲ್ತಾಫ್ ಮತ್ತು ಯೂಸುಫ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.