​ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

Update: 2017-01-12 17:50 GMT

ಶಿವಮೊಗ್ಗ, ಜ. 12: ಜಿಲ್ಲೆಯ ಏಳು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯ 83 ಕ್ಷೇತ್ರಗಳಿಗೆ ಗುರುವಾರ ಚುನಾವಣೆಯು ಯಾವುದೇ ಗೊಂದಲ _ ಗಡಿಬಿಡಿಯಿಲ್ಲದೆ, ಸುಗಮ - ಶಾಂತಿಯುತವಾಗಿ ನಡೆಯಿತು. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಆರಂಭವಾದ ಮತದಾನ ಕಾರ್ಯವು ಸಂಜೆ 4 ಗಂಟೆಯವರೆಗೆ ನಡೆಯಿತು. ನಿಗದಿತ ಅವಧಿಯೊಳಗೆ ಮತಗಟ್ಟೆಯಲ್ಲಿದ್ದವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿ, ತಡವಾಗಿ ಬಂದವರಿಗೆ ಮತದಾನ ಮಾಡಲು ಅವಕಾಶ ನಿರಾಕರಿಸುತ್ತಿದ್ದ ದೃಶ್ಯ ಕೆಲ ಮತಗಟ್ಟೆಗಳಲ್ಲಿ ಕಂಡುಬಂದಿತು. ನೀರಸ: ಬೆಳಗ್ಗೆ ಬಹುತೇಕ ಬೂತ್‌ಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಿತ್ತು. ನೀರಸ ಪ್ರತಿಕ್ರಿಯೆ ಕಂಡುಬಂದಿತು.

ಬಿಸಿಲೇರುತ್ತಿದ್ದಂತೆ ಮತಗಟ್ಟೆಗೆ ಆಗಮಿಸುವ ಮತದಾರರ ಸಂಖ್ಯೆಯು ಕೂಡ ಹೆಚ್ಚಾಯಿತು. ಆದಾಗ್ಯೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾರರು ಮತಗಟ್ಟೆಗೆ ಆಗಮಿಸದೆ ಇದ್ದಿದ್ದು ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿತ್ತು. ಕೆಲ ಬೂತ್‌ಗಳಲ್ಲಿ ಮಧ್ಯಾಹ್ನದವರೆಗೂ ನೀರಸ ಪ್ರತಿಕ್ರಿಯೆ ಕಂಡುಬಂದರೆ, ಉಳಿದ ಬೂತ್‌ಗಳಲ್ಲಿ ಅತ್ಯಂತ ಉತ್ಸಾಹದಿಂದ ಮತದಾರರು ಮತ ಚಲಾವಣೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಇಷ್ಟೆಲ್ಲದರ ಹೊರತಾಗಿಯೂ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟಾರೆ ಚಲಾವಣೆಯಾದ ಮತಗಳ ಪ್ರಮಾಣ ಶೇ. 20.57 ರಷ್ಟು ಮಾತ್ರವಾಗಿತ್ತು. ಮಧ್ಯಾಹ್ನ 3 ಗಂಟೆಯವರೆಗೆ ಶೇ. 33.12 ರಷ್ಟು ಮತದಾನವಾಗಿತ್ತು.

ಶಾಂತಿಯುತ: ಏಳು ತಾಲೂಕುಗಳಲ್ಲಿ ತಲಾ 14 ಕ್ಷೇತ್ರಗಳಿದ್ದು, ಒಟ್ಟಾರೆ 98 ಕ್ಷೇತ್ರಗಳಿವೆ. ಇದರಲ್ಲಿ 13 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಸೊರಬ ಹಾಗೂ ಹೊಸನಗರದ ತಲಾ ಒಂದು ಕ್ಷೇತ್ರದಲ್ಲಿ ನಾಮಪತ್ರವೇ ಸಲ್ಲಿಕೆಯಾಗಿರಲಿಲ್ಲ.


ಉಳಿದ 83 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 249 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 2,79,236 ಜನ ಮತದಾನದ ಹಕ್ಕು ಹೊಂದಿದ್ದು, ಮತದಾನ ಕಾರ್ಯಕ್ಕಾಗಿ 406 ಮತ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿತ್ತು. ಮತಗಟ್ಟೆಗಳಿಗೆ 407 ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಅಷ್ಟೇ ಸಂಖ್ಯೆಯ ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 874 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಪ್ರತಿಯೊಂದು ಮತಗಟ್ಟೆಗೂ ಪೊಲೀಸ್ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಭದ್ರ: ಈ ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿತು. ಅಭ್ಯರ್ಥಿಗಳು ಮತದಾರರ ಮನವೊಲಿಕೆಗೆ ನಾನಾ ರೀತಿಯ ಕಸರತ್ತು ನಡೆಸಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ
ು ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಜ. 14 ರಂದು ಸೋಲು - ಗೆಲುವಿನ ಭವಿಷ್ಯ ಹೊರಬೀಳಲಿದೆ.
 ನಾಳೆ ಮತ ಎಣಿಕೆ
ಎಪಿಎಂಸಿಯ 83 ಕ್ಷೇತ್ರಗಳಿಗೆ ಜ. 12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಜ.14 ರಂದು ಆಯಾ ತಾಲೂಕು ಕೇಂದ್ರಗಳ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದೊಳಗೆ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News