×
Ad

ಕೇಂದ್ರದ ಸಾಧನೆ ಶೂನ್ಯ: ಸಚಿವ ಸೀತಾರಾಂ

Update: 2017-01-13 23:08 IST

ಮಡಿಕೇರಿ ಜ.13: ನೋಟುಗಳ ಚಲಾವಣೆೆಯನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮವನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಗಾಂಧಿ ಮಂಟಪದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಧಿಕ್ಕಾರ ಕೂಗಿದರು.


 ದೇಶದಲ್ಲಿ ಜನ ಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ದೂರ ಮಾಡಲು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಕೇಂದ್ರ ಸರಕಾರ ಕೆೇವಲ ಮಾತಿನಲ್ಲಷ್ಟೇ ಕಾಲ ಹರಣ ಮಾಡುತ್ತಿದ್ದು, ಕೆಲಸ ಕಾರ್ಯಗಳ ಸಾಧನೆ ಶೂನ್ಯವೆಂದು ಟೀಕಿಸಿದರು. ಕಳೆದ 64 ವರ್ಷಗಳ ಗಣತಂತ್ರ ವ್ಯವಸ್ಥೆಯಲ್ಲಿ 20 ವರ್ಷಗಳ ಕಾಲ ಬಿಜೆಪಿ ಬೆಂಬಲಿತ ಸರಕಾರಗಳು ದೇಶವನ್ನು ಆಳಿವೆ. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವ ಬಿಜೆಪಿ ಈ ಇಪ್ಪತ್ತು ವರ್ಷಗಳಲ್ಲಿ ದೇಶಕ್ಕೆ ಯಾವ ಕೊಡುಗೆ ನೀಡಿದೆ ಎಂಬುವುದನ್ನು ಬಹಿರಂಗಪಡಿಸಲಿ ಎಂದು ಅವರು ಒತ್ತಾಯಿಸಿದರು.


 ನೋಟುಗಳ ಚಲಾವಣೆಯನ್ನು ರದ್ದು ಮಾಡಿರುವುದರಿಂದ ಮಂಗಳ ಕಾರ್ಯಗಳು ಸ್ಥಗಿತಗೊಂಡಿವೆ, ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ, ರೈತರು ಕೃಷಿ ಕಾರ್ಯದಲ್ಲಿ ತೊಡಗಲಾರದೆ, ತೋಟದ ಮಾಲಕರು ಕಾರ್ಮಿಕರಿಗೆ ವೇತನವನ್ನು ನೀಡಲಾಗದೆ ಸಂಕಷ್ಟವನ್ನು ಎದುರಿಸಿದ್ದಾರೆ. ಕೇಂದ್ರ ಸರಕಾರ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವ ಮೂಲಕ ಕಪ್ಪುಹಣವನ್ನು ಬಿಳಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು.
  ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಮಾತನಾಡಿ, ನ.8 ರಂದು ರಾತ್ರಿ 8 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡುವ ಮೂಲಕ ನಿಮ್ಮ ಸಂಪಾದನೆಯನ್ನು ನಿಮಗಿಲ್ಲದಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಬಡವರ ಪರವಾಗಿ ಹೋರಾಡಲು ಕಾಂಗ್ರೆಸ್ ಸದಾ ಸಿದ್ಧವಿದ್ದು, ಕೇಂದ್ರದ ಅನಾಚಾರವನ್ನು ಪ್ರತಿಯೊಬ್ಬರು ಧಿಕ್ಕರಿಸಬೇಕೆಂದು ಕರೆ ನೀಡಿದರು. ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಚೆೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಸಿದ್ಧರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಪದ್ಮಿನಿ ಪೊನ್ನಪ್ಪ, ಮಂಜುನಾಥ್ ಕುಮಾರ್, ಕಾವೇರಮ್ಮ ಸೋಮಣ್ಣ, ಕೆ.ಯು. ಅಬ್ದುಲ್ ರಝಾಕ್, ಕೆ.ಎಂ. ಲೋಕೇಶ್ ಕುಮಾರ್, ಅರುಣ್ ಮಾಚಯ್ಯ, ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್,ಕುಮುದಾ ಧರ್ಮಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಕಷ್ಟ, ನಷ್ಟಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಪ್ರಧಾನ ಮಂತ್ರಿಗಳು ಮೊದಲು ಉತ್ತರ ನೀಡಲಿ. ಆರ್ಥಿಕ ವ್ಯವಸ್ಥೆ ಸುಧಾರಿಸುವುದಕ್ಕೆ 50 ದಿನಗಳ ಕಾಲಾವಕಾಶವನ್ನು ಕೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ದಿನ ಯಾವುದೇ ಹೋರಾಟವನ್ನು ನಡೆಸದೆ ಸುಮ್ಮನಿರಬೇಕಾಯಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಈಗಿನ ಬಿಜೆಪಿ ಸರಕಾರ ಮುಂದುವರಿಸಿಕೊಂಡು ಹೋಗುತ್ತಿದೆಯೆ ಹೊರತು ಯಾವುದೇ ಹೊಸತನವಿಲ್ಲ.
ಉಮಾಶ್ರೀ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ
ಕೇಂದ್ರದಲ್ಲಿದ್ದ ಯುಪಿಎ ಸರಾರ ಆಧಾರ್ ಕಾರ್ಡ್‌ನ್ನು ಜಾರಿಗೆ ತಂದಾಗ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ, ಇದೀಗ ಎಲ್ಲಾ ವ್ಯವಹಾರಗಳಿಗೆ ಆಧಾರನ್ನೇ ಬಳಸಿಕೊಳ್ಳುತ್ತಿದೆ. ದೇಶದ ಜನರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿರುವ ಕೇಂದ್ರ ಸರಕಾರ ಖಾತೆದಾರರಿಗೆ ಶೇ.18 ರಷ್ಟು ಬಡ್ಡಿ ನೀಡಬೇಕಾಗಿದೆ.
ಹುಸೈನ್, ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ನಕಲಿ ನೋಟು ಹಾಗೂ ಯೋತ್ಪಾದನೆಯ ನಿಯಂತ್ರಣಕ್ಕಾಗಿ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದಾಗಿ ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ, ನ.9ರಂದೇ ನಕಲಿ ನೋಟು ಪತ್ತೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಜನರು ಸಿವನ್ನು ಕೂಡ ನೀಗಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಉಷಾ ನಾಯ್ಡು, ಎಐಸಿಸಿ ಸಂಯೋಜಕಿ
ಕೇಂದ್ರ ಸರಕಾರದಿಂದ ಬಡವರ ಬದುಕು ನಾಶ: ಸಚಿವೆ ಉಮಾಶ್ರೀ
ದೇಶದಲ್ಲಿ ಆರ್ಥಿಕ ಸಂಕಷ್ಟವನ್ನು ಸೃಷ್ಟಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಡವರ ಬದುಕನ್ನು ನಾಶ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀ ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ನಂತರ ಇಲ್ಲಿಯವರೆಗೆ ಶೇ.12.40 ಯಷ್ಟು ಮಾತ್ರ ಕಾಳ ಧನವನ್ನು ಸಂಗ್ರಹಿಸಲಾಗಿದೆ. ಇಷ್ಟು ಕಾಳಧನವನ್ನು ಸಂಗ್ರಹಿಸುವುದಕ್ಕಾಗಿ ಶೇ.86 ರಷ್ಟು ಪ್ರಾಮಾಣಿಕ ಜನರಿಗೆ ಶಿಕ್ಷೆಯನ್ನು ನೀಡಲಾಗಿದೆ ಎಂದು ಆರೋಪಿಸಿದರು.
ಈ ದೇಶದ ಜನರು ಬೆವರಿನ ಹನಿ ಸುರಿಸಿ ಹಣವನ್ನು ಕೂಡಿಟ್ಟಿದ್ದಾರೆಯೆ ಹೊರತು, ಇವುಗಳೆಲ್ಲವೂ ಕಾಳಧನವಲ್ಲವೆಂದ ಅವರು, ಆರ್ಥಿಕ ಸಂಕಷ್ಟದಿಂದ ಅನೇಕ ಜರು ಮೃತಪಟ್ಟಿದ್ದಾರೆ. ಆದರೆ, ಇವರ ಕುಟುಂಬಗಳಿಗೆ ಕೇಂದ್ರ ಸರಕಾರ ಯಾವುದೇ ಪರಿಹಾರ ನೀಡಿಲ್ಲ, ಮಾತ್ರವಲ್ಲ. ಸಾಂತ್ವನವನ್ನು ಕೂಡ ಹೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 


ದೇಶದಲ್ಲಿ ವರ್ಷಕ್ಕೆ ಒಂದು ಬಾರಿ ತೆರಿಗೆ ಅಧಿಕಾರಿಗಳ ದಾಳಿ ಸಾಮಾನ್ಯವಾಗಿದ್ದು, ಪ್ರಸ್ತುತ ನಡೆಯುತ್ತಿರುವ ದಾಳಿ ವಿಶೇಷವಲ್ಲ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಹುಲ್ ಗಾಂ  ಧಿ ಜನರ ಪರವಾದ ಪ್ರಶ್ನೆಗಳನ್ನು ಕೇಂದ್ರ ಸರಕಾರಕ್ಕೆ ನೀಡಿದ್ದು, ಇದಕ್ಕೆ ಪ್ರಧಾನ ಮಂತ್ರಿಗಳು ಉತ್ತರಿಸಬೇಕು. ಉತ್ತರ ನೀಡದಿದ್ದಲ್ಲಿ 2019ರಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಕೊಡಗು ಜಿಲ್ಲೆಗೆ ಏನು ನೀಡಿದ್ದಾರೆ ಎನ್ನುವುದನ್ನು ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂ.ಆರ್. ಸೀತಾರಾಮ್, ಜಿಲ್ಲಾ ಉಸ್ತುವಾರಿ ಸಚಿವ ಸರಕಾರಿ ಗೌರವಗಳೊಂದಿಗೆ ಯೋಧ ಹುದೇರಿ ಎ. ಮೋಹನ್‌ಗೆ ಅಂತಿಮ ನಮನ ಮಡಿಕೇರಿ ಜ.13: ಪಶ್ಚಿಮ ಬಂಗಾಳದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಹುದೇರಿ ಎ. ಮೋಹನ್(50) ಅವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಮದೆನಾಡು ಬಳಿಯ ಕಾಟಿಕೇರಿ ಗ್ರಾಮದಲ್ಲಿ ನೆರವೇರಿತು.


ಕಳೆದ ಮೂರು ದಶಕಗಳಿಂದ ಬಿಎಸ್‌ಎಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೋಹನ್ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಕಳೆದ ಹತ್ತು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮಾಲ್ಡಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಜ.11 ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಮೃತರು ಪತ್ನಿ ಚೆರಿಯಮನೆ ಶೀಲಾ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.


ಯೋಧನ ಪಾರ್ಥಿವ ಶರೀರವನ್ನು ಕೋಲ್ಕತ್ತಾದಿಂದ ಬೆಂಗಳೂರಿನ ಬಿಎಸ್‌ಎಫ್ ಕೇಂದ್ರಕ್ಕೆ ತಂದು ಅಲ್ಲಿ ಅಂತಿಮ ಗೌರವವನ್ನು ಸಲ್ಲಿಸಲಾಯಿತು. ಬಳಿಕ ಇಂದು ಬೆಳಗ್ಗೆ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಕಾಟಿಕೇರಿಗೆ ತರಲಾಯಿತು.


  ಕಾಟಿಕೇರಿಯಲ್ಲಿ ಬೆಳಗ್ಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೆೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಹಶೀಲ್ದಾರ್ ಕುಸುಮಾ ಸೇರಿದಂತೆ ಹಲವು ಗಣ್ಯರು ಮತ್ತು ಗ್ರಾಮಸ್ಥರು ಅಂತಿಮ ಗೌರವ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ದಳ ಕುಶಾಲ ತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದ ಬಳಿಕ ಯೋಧ ಮೋಹನ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿ ಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News