ರಿಸರ್ವ್ ಬ್ಯಾಂಕ್ ಗೆ ಸರಿಪಡಿಸಲಾಗದಷ್ಟು ಹಾನಿ : ಉದ್ಯೋಗಿಗಳಿಂದ ಗವರ್ನರ್ ಗೆ ಪತ್ರ

Update: 2017-01-14 06:27 GMT

ಹೊಸದಿಲ್ಲಿ, ಜ.14: ಯೂನಿಯನ್ ಫೋರಂ ಆಫ್ ರಿಸರ್ವ್ ಬ್ಯಾಂಕ್ ಆಫೀಸರ್ಸ್‌ ಆ್ಯಂಡ್ ಎಂಪ್ಲಾಯೀಸ್ ಎಂಬ ಹೆಸರಿನ ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ ತಮಗೆ ಬ್ಯಾಂಕಿನ ಸ್ವಾತಂತ್ರ್ಯಕ್ಕೆಧಕ್ಕೆಯಾಗುತ್ತಿದೆಯೇನೋ ಎಂಬ ಬಗ್ಗೆ ಕಳವಳವಿದೆ ಎಂದು ಹೇಳಿದೆ.

ರಿಸರ್ವ್ ಬ್ಯಾಂಕಿನ ಕರೆನ್ಸಿ ವ್ಯವಹಾರಗಳಲ್ಲಿ ಸಹಕರಿಸುವ ನಿಟ್ಟಿನಲ್ಲಿ ಸಹಾಯ ಮಾಡುವ ವಿತ್ತ ಸಚಿವಾಲಯದ ನಿರ್ಧಾರವನ್ನು ಈ ಪತ್ರ ಕಟುವಾಗಿ ಟೀಕಿಸಿದೆ.

‘‘ವಿತ್ತ ಸಚಿವಾಲಯವು ರಿಸರ್ವ್ ಬ್ಯಾಂಕಿನ ಕರೆನ್ಸಿ ವ್ಯವಹಾರಗಳಲ್ಲಿ ಸಹಾಯ ಮಾಡುವ ಸಲುವಾಗಿ ಜಂಟಿ ಕಾರ್ಯದರ್ಶಿಯನ್ನು ಕಳುಹಿಸುತ್ತಿರುವುದಾಗಿ ಹೇಳುವ ವರದಿಗಳು ನಮ್ಮ ಗಮನಕ್ಕೆ ಬಂದಿದೆ. ಇದು ತೀರಾ ದುರದೃಷ್ಟಕರ. ಇಂತಹ ಕ್ರಮವೇನಾದರೂ ಕೈಗೊಂಡರೆ ಇದು ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ ತರುವುದಲ್ಲದೆ ಅದರ ಕಾರ್ಯನಿರ್ವಹಣೆಯನ್ನೂ ಬಾಧಿಸುವುದು’’ ಎಂದು ಪತ್ರ ತಿಳಿಸಿದೆ.

ಕಳೆದ ಎಂಟು ದಶಕಗಳಿಂದ ತನ್ನಕರ್ತವ್ಯಗಳನ್ನು ಅಬಾಧಿತವಾಗಿ ನಿರ್ವಹಿಸುತ್ತಿರುವ ಆರ್ ಬಿಐ ನವೆಂಬರ್ 8ರ ನೋಟು ಅಮಾನ್ಯೀಕರಣದ ನಂತರವೂ ಯಾವುದೇ ತೊಂದರೆಯಿಲ್ಲದೆ ತನ್ನ ಕಾರ್ಯಗಳನ್ನು ಮುಂದುವರಿಸುತ್ತಿದೆ ಎಂದು ತಿಳಿಸಿದ ಪತ್ರ, ರಿಸರ್ವ್ ಬ್ಯಾಂಕಿನ ‘ಕೆಟ್ಟ ಕಾರ್ಯನಿರ್ವಹಣೆ’ಯ ಬಗ್ಗೆ ಹಲವು ಕಡೆಗಳಿಂದ ಟೀಕೆಗಳು ಬರುತ್ತಿದ್ದು, ಆರ್ ಬಿಐ ವರ್ಚಸ್ಸು ಹಾಗೂ ಸ್ವಾಯತ್ತತೆಗೆ ಸರಿಪಡಿಸಲಾಗದ ಹಾನಿಯುಂಟಾಗಿದೆ. ಹೀಗೆ ಟೀಕೆ ಮಾಡಿದವರಲ್ಲಿ ಹಿಂದಿನ ಆರ್ ಬಿಐ ಗವರ್ನರುಗಳೂ ಸೇರಿದ್ದಾರೆ ಎಂದು ಸಂಘಟನೆ ದೂರಿದೆ.

ವಿತ್ತ ಸಚಿವಾಲಯದ ಅನಗತ್ಯಹಸ್ತಕ್ಷೇಪವನ್ನು ಕೊನೆಗಾಣಿಸಲು ಅಗತ್ಯ ಕ್ರಮ ಕೈಗೊಳ್ಳಿ ಹಾಗೂ ಈ ಬಗ್ಗೆ ಉದ್ಯೋಗಿಗಳಿಗೆ ಭರವಸೆ ನೀಡಿ ಎಂದು ಪತ್ರ ಕೊನೆಯದಾಗಿ ಗವರ್ನರ್ ಉರ್ಜಿತ್ ಪಟೇಲ್ ಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News