×
Ad

ಎಲ್ಲೆಡೆ ಎಪಿಎಂಸಿ ಚುನಾವಣೆ ಫಲಿತಾಂಶ ಪ್ರಕಟ

Update: 2017-01-14 23:02 IST

ಸೊರಬ: ಜೆಡಿಎಸ್ ತೆಕ್ಕೆಗೆ
 ಸೊರಬ,ಜ.14: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 13 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಒಂದು ಅವಿರೋಧ ಆಯ್ಕೆ ಸೇರಿದಂತೆ ಒಟ್ಟು 9 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದು, ಎಪಿಎಂಸಿ ಗದ್ದುಗೆ ಏರಲು ಅಗತ್ಯ ಇರುವ ಬಹುಮತ ಗಳಿಸಿದೆ. ಸಂಕ್ರಾಂತಿಯ ದಿನದಂದು ಚುನಾವಣೆ ಫಲಿತಾಂಶ ಹೊರಬಂದಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.


 ಪ್ರಮುಖ ಮೂರು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು. ಜೆಡಿಎಸ್ ಸ್ಪಷ್ಟ ಬಹುಮತವನ್ನು ಗಳಿಸಿದರೆ, ಬಿಜೆಪಿ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದರೆ, ವರ್ತಕರ ಕ್ಷೇತ್ರವನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಕ್ಷೇತ್ರದಲ್ಲಿ ಶಾಸಕ ಮಧು ಬಂಗಾರಪ್ಪ ತಮ್ಮ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿಂದೆ ನಡೆದಿದ್ದ ಜಿಪಂ ಚುನಾವಣೆಯಲ್ಲಿ ಸೊರಬದ 5 ಕ್ಷೇತ್ರಗಳಲ್ಲಿ ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿತ್ತು. ಅಲ್ಲದೆ, ಜಿಪಂನ ಒಟ್ಟು 31 ಸ್ಥಾನಗಳಲ್ಲಿ ಕೇವಲ 7 ಸದಸ್ಯರನ್ನು ಹೊಂದಿದ್ದರೂ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ನಂತರ ತಾಪಂ ಚುನಾವಣೆಯಲ್ಲಿ ಬಿಜೆಪಿ 5 ಹಾಗೂ ಕಾಂಗ್ರೆಸ್ 3 ಸ್ಥಾನ ಗಳಿಸಿದರೆ 11 ಕ್ಷೇತ್ರಗಳಲ್ಲಿ ಮಧುಬಂಗಾರಪ್ಪ ನೇತೃತ್ವದಲ್ಲಿ ಜೆಡಿಎಸ್ ಭರ್ಜರಿ ವಿಜಯದ ನಗೆ ಬೀರಿ ತಾಪಂನ ಅಧಿಕಾರದ ಗದ್ದುಗೆ ಏರಿತ್ತು. ಈಗ ಮತ್ತೊಮ್ಮ ಎಪಿಎಂಸಿ ಅಧಿಕಾರವು ಜೆಡಿಎಸ್‌ಗೆ ಲಭಿಸಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಿದ್ದ ಎಪಿಎಂಸಿ ಚುನಾವಣೆಯ ಫಲಿತಾಂಶದ ಪರಿಣಾಮ ಮಾಜಿ ಸಚಿವ ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ ಅವರಿಗೆ ತೀವ್ರ ಮುಖಭಂಗವಾಗಿದ್ದರೆ, ಹರತಾಳು ಹಾಲಪ್ಪ ಅಲ್ಪ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಚುನಾವಣೆಯ ಮತ ಎಣಿಕೆಯ ಕಾರ್ಯವು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಗುತ್ತಿದ್ದಂತೆ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರ ಕಾರ್ಯಕರ್ತರು ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಕುತೂಹಲದಿಂದ ಫಲಿತಾಂಶ ವೀಕ್ಷಿಸಲು ಆಗಮಿಸಿದ್ದರು.
ಫಲಿತಾಂಶವಿವರ
  ಸಾಮಾನ್ಯ ಮೀಸಲಿರಿಸಿದ ಸ್ಥಾನಗಳಾದ ಚಂದ್ರಗುತ್ತಿ ಕ್ಷೇತ್ರದಿಂದ ಎಚ್.ಕೆ. ಜಯಶೀಲಗೌಡ, ಹಳೆ ಸೊರಬ ಕ್ಷೇತ್ರದಿಂದ ಜೆ. ಪ್ರಕಾಶ್(ಕೆರಿಯಪ್ಪ), ದ್ಯಾವನಹಳ್ಳಿ ಕ್ಷೇತ್ರದಿಂದ ನೀಲಕಂಡಗೌಡ ಬಾಸೂರು ಹಾಗೂ ಕುಪ್ಪಗಡ್ಡೆ ಕ್ಷೇತ್ರದಿಂದ ಎಲ್.ಜಿ. ರಾಜಶೇಖರ, ಹೊಸಬಾಳೆ ಕ್ಷೇತ್ರದಿಂದ ಹಿಂದುಳಿದ ಅ ವರ್ಗಕ್ಕೆ ಮೀಸಲಿರಿಸಿದ ಸ್ಥಾನಕ್ಕೆ ಕೆ. ಅಜ್ಜಪ್ಪ ಕಾಸರಗುಪ್ಪೆ, ಮಹಿಳಾ ಮೀಸಲಿರಿಸಿದ ಸ್ಥಾನಗಳಿಗೆ ಉಳವಿ ಕ್ಷೇತ್ರದಿಂದ ಶಾಂತಮ್ಮ ಹಾಗೂ ಮಾವಲಿ ಕ್ಷೇತ್ರದಿಂದ ಸರಸ್ವತಿ ಪ್ರಶಾಂತ್ ಮೇಸ್ತ್ರಿ, ಎಣ್ಣೆಕೊಪ್ಪ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜಯಶೀಲಪ್ಪಆಯ್ಕೆಯಾಗುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.

ಜೊತೆಯಲ್ಲಿ ಈ ಹಿಂದೆಯೇ ಸಹಕಾರಿ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ರಾಜೇಂದ್ರ ನಾಯ್ಕಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಜಡೆ ಸಾವಾನ್ಯ ಮೀಸಲಿರಿಸಿದ ಕ್ಷೇತ್ರದಿಂದ ರಾಜೂಗೌಡ ಕಮರೂರು, ಆನವಟ್ಟಿ ಹಿಂದುಳಿದ ಬ ವರ್ಗಕ್ಕೆ ಮೀಸಲಿರಿಸಿದ ಕ್ಷೇತ್ರದಿಂದ ಎ.ಪಿ. ದಯಾನಂದ ಗೌಡ ಆನವಟ್ಟಿ, ಮೂಡಿ ಎಸ್ಟಿ ಮೀಸಲು ಕ್ಷೇತ್ರದಿಂದ ನಾಗರಾಜ್ ಎಂ. ಹುರುಳಿಕೊಪ್ಪ ಗೆಲುವು ಸಾಧಿಸುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಂತೆಯೇ ವರ್ತಕರ ಕ್ಷೇತ್ರದಿಂದ ಫಯಾಝ್ ಅಹ್ಮದ್ ಉಳವಿ ಜಯಸಾಧಿಸುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದಂತಾಗಿದೆ.

ದಾವಣಗೆರೆ : ಕಾಂಗ್ರೆಸ್ ತೆಕ್ಕೆಗೆ
ದಾವಣಗೆರೆ: ಜಿಲ್ಲೆಯ ಎಪಿಎಂಸಿ ಚುನಾವಣೆಯ ಮತ ಎಣಿಕೆಯು ಶನಿವಾರ ಇಲ್ಲಿನ ಮೋತಿ ವೀರಪ್ಪ ಕಾಲೇಜಿನಲ್ಲಿ ನಡೆದಿದ್ದು, ಆಡಳಿತ ರೂಢ ಕಾಂಗ್ರೆಸ್ ಜಿಲ್ಲೆಯ ಮೂರು ತಾಲೂಕುಗಳ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ದಾವಣಗೆರೆ, ಹರಪನಹಳ್ಳಿ, ಜಗಳೂರು ಎಪಿಎಂಸಿಗಳು ಕಾಂಗ್ರೆಸ್ ವಶವಾಗಿದೆ. ಹರಿಹರ, ಹೊನ್ನಾಳಿ ಎಪಿಎಂಸಿಗಳು ಅತಂತ್ರವಾಗಿವೆ. ಚನ್ನಗಿರಿ ಎಪಿಎಂಸಿ ಬಿಜೆಪಿ ವಶವಾಗಿದೆ.
ದಾವಣಗೆರೆ : ತಾಲೂಕಿನ ಒಟ್ಟು 14 ಎಪಿಎಂಸಿ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಸೇರಿದಂತೆ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿ ಎಪಿಎಂಸಿ ತನ್ನ ವಶಕ್ಕೆ ತೆಗೆದುಕೊಂಡಿದೆ. ನಾಲ್ಕು ಬಿಜೆಪಿ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಹರಪನಹಳ್ಳಿ : ತಾಲೂಕಿನ ಒಟ್ಟು 13 ಎಪಿಎಂಸಿ ಕ್ಷೇತ್ರಗಳಲ್ಲಿ 12 ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಅರಸೀಕೆರೆಯ ಒಬ್ಬ ಬಿಜೆಪಿ ಅಭ್ಯರ್ಥಿ ಮಾತ್ರ ಜಯಸಾಧಿಸಿದ್ದಾರೆ. ಜಗಳೂರು : ತಾಲೂಕಿನ ಒಟ್ಟು 13 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಸಾಧಿಸಿದರೆ, 5 ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆಲುವು ಕಂಡಿದ್ದಾರೆ. ಜಗಳೂರು ಎಪಿಎಂಸಿ ಕೂಡ ಕಾಂಗ್ರೆಸ್ ವಶವಾಗಿದೆ. ಹರಿಹರ : ತಾಲೂಕಿನ 13 ಎಪಿಎಂಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳು ಗೆದ್ದರೆ, ಬಿಜೆಪಿಯ ಮೂವರು ಅಭ್ಯರ್ಥಿಗಳು ಹಾಗೂ ಜೆಡಿಎಸ್ ನ 6 ಅಭ್ಯರ್ಥಿಗಳು ಗೆಲ್ಲುವ ಮೂಲಕ ಹರಿಹರ ಎಪಿಎಂಸಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಹೊನ್ನಾಳಿ : ತಾಲೂಕಿನ ಒಟ್ಟು 14 ಕ್ಷೇತ್ರಗಳಲ್ಲಿ 6 ಬಿಜೆಪಿ ಅಭ್ಯರ್ಥಿಗಳು, 6 ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು 2 ರಾಯಣ್ಣ ಬ್ರಿಗೇಡ್ ಬೆಂಬಲಿತ ಅಭ್ಯರ್ಥಿಗಳು ಗೆಲುವ ಸಾಧಿಸುವ ಮೂಲಕ ಹೊನ್ನಾಳಿ ಎಪಿಎಂಸಿ ಕೂಡ ಅತಂತ್ರ ಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 80 ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದು ಉಳಿದ 64 ಕ್ಷೇತ್ರಗಳಿಗೆ ಇದೇ ಜ.12ರಂದು ಚುನಾವಣೆ ನಡೆದಿತ್ತು. ಒಟ್ಟು 161 ಅಭ್ಯರ್ಥಿಗಳು ಕಣದಲ್ಲಿದ್ದರು. ಬಹುತೇಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತ ಸಾಧಿಸುವ ಮೂಲಕ 3 ಎಪಿಎಂಸಿಗಳು ಕೈವಶವಾದರೆ, 2 ಎಪಿಎಂಸಿಗಳಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಇದ್ದು, ಚನ್ನಗಿರಿ ಎಪಿಎಂಸಿಯಲ್ಲಿ ಮಾತ್ರ ಬಿಜೆಪಿ ಸ್ವಂತ ಬಲದಿಂದ ಗದ್ದುಗೆ ಏರಲು ಸಿದ್ಧವಾಗಿದೆ.

ಭದ್ರಾವತಿ: ಜೆಡಿಎಸ್ ತೆಕ್ಕೆಗೆ
ಭದ್ರಾವತಿ ತಾಲೂಕಿನಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಿದೆ. 14 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿತ್ತು. ಒಟ್ಟಾರೆ ಜೆಡಿಎಸ್ ಬೆಂಬಲಿ ಅಭ್ಯರ್ಥಿಗಳು 8 ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ. ಉಳಿದಂತೆ ನಾಲ್ಕರಲ್ಲಿ ಕಾಂಗ್ರೆಸ್ ಹಾಗೂ ಎರಡರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರಿಗೆ ಈ ಫಲಿತಾಂಶವು ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದೆ.

ಶಿವಮೊಗ್ಗ : ಬಿಜೆಪಿ ವಶ
ಶಿವಮೊಗ್ಗ: ತಾಲೂಕಿನಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. 14 ಕ್ಷೇತ್ರಗಳಲ್ಲಿ 1 ಕ್ಷೇತ್ರಕ್ಕೆ ಅಭ್ಯರ್ಥಿಯ ಅವಿರೋಧ ಆಯ್ಕೆಯಾಗಿತ್ತು. ಉಳಿದಂತೆ 13 ಕ್ಷೇತ್ರಗಳಿಗೆ ಚುನಾವೆ ನಡೆದಿತ್ತು. ಒಟ್ಟಾರೆ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ (ಬಂಡಾಯ-ಪಕ್ಷೇತರ ಬೆಂಬಲ ಸೇರಿ). ಉಳಿದಂತೆ ಜೆಡಿಎಸ್‌ನ 4 ಹಾಗೂ ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶಿವಮೊಗ್ಗ 

್ರಾಮಾಂತರದ ಜೆಡಿಎಸ್ ಪಕ್ಷದ ಶಾಸಕಿ ಶಾರದಾ ಪೂರ್ಯನಾಯ್ಕರವರಿಗೆ ಈ ಚುನಾವಣೆಯಲ್ಲಿ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ.

ಸಾಗರ: ಕಾಂಗ್ರೆಸ್, ಬಿಜೆಪಿ ಸಮಬಲ
ಸಾಗರ: ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಸಾಧನೆ ಮಾಡಿವೆ. ಒಟ್ಟಾರೆ 14 ಸ್ಥಾನಗಳಲ್ಲಿ ಎರಡು ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಒಟ್ಟಾರೆ ಬಲಾಬಲದಲ್ಲಿ ಎರಡು ಪಕ್ಷಗಳ ಬೆಂಬಲಿತ ತಲಾ 6 ಅಭ್ಯರ್ಥಿಗಳು ಚುನಾಯಿ ತರಾಗಿದ್ದಾರೆ. ಜೆಡಿಎಸ್ ಬೆಂಬಲಿತ ಓರ್ವ ಅಭ್ಯರ್ಥಿ ಆಯ್ಕೆ ಯಾಗಿದ್ದಾರೆ. ಉಳಿದಂತೆ ಯಾವುದೇ ಪಕ್ಷದ ಕಣಕ್ಕಿಳಿದಿದ್ದ ಅಭ್ಯರ್ಥಿಯೋರ್ವರು ಆಯ್ಕೆಯಾಗಿದ್ದಾರೆ. ಈ ಫಲಿ ತಾಂಶವು ಕ್ಷೇತ್ರದ ಶಾಸಕ ಗೋಡು ತಿಮ್ಮಪ್ಪಅವರಿಗೆ ಕಭೀ ಖುಷಿ-ಕಭೀ ಗಮ್‌ನಂತಾಗಿದೆ.

ತೀರ್ಥಹಳ್ಳಿ : ಕಾಂಗ್ರೆಸ್‌ಗೆ
ತೀರ್ಥಹಳ್ಳಿ: ತಾಲೂಕಿನ ಪ್ರತಿಷ್ಠಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಮಂದಿ ಸ್ಪರ್ಧಿಗಳು ಹಾಗೂ ಬಿಜೆಪಿ ಬೆಂಬಲಿತ 3 ಸ್ಪರ್ಧಿಗಳು ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಎಪಿಎಂಸಿಯ ಅಧಿಕಾರವು ಕಾಂಗ್ರೆಸ್‌ನ ಕೈವಶವಾದಂತಾಗಿದೆ.14 ಸ್ಥಾನಗಳ ಎಪಿಎಂಸಿಯಲ್ಲಿ 3 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. 11 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿತ್ತು. ಇಂದು ಪಟ್ಟಣದ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ನಡೆದ ಮತ ಎಣಿಕೆಯ ನಂತರ ಪ್ರಕಟಗೊಂಡ ಫಲಿತಾಂಶ ಕೆಳಕಂಡಂತಿದೆ.
ದೇವಂಗಿ ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ಬಿ. ಗಣಪತಿ 669 ಮತಗಳು, ಬಿಜೆಪಿ ಬೆಂಬಲಿತ ಚಂದ್ರಶೇಖರ್ ಕೆ.ಎಸ್. 408 ಮತಗಳು.

ಸಾಲ್ಗಡಿ ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ಯಲ್ಲಪ್ಪ 855 ಮತ, ಬಿಜೆಪಿ ಬೆಂಬಲಿತ ಗಿರೀಶ್ 643 ಮತಗಳು.
 ಹೊದಲ-ಅರಳಾಪುರ ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ಎಸ್.ವಿ. ಲೋಕೇಶ್ 763 ಮತಗಳು, ಬಿಜೆಪಿ ಬೆಂಬಲಿತ ಕೆ. ಹಾಲಪ್ಪ 412, ಪಕ್ಷೇತರ ಅಭ್ಯರ್ಥಿ ಕೆ. ಆರ್. ಶ್ರೀನಾಥ್ 52 ಮತಗಳು.
ಮುಳುಬಾಗಿಲು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತೆ ಉಷಾ ಭಾಸ್ಕರ್ 812 ಮತಗಳು, ಬಿಜೆಪಿ ಬೆಂಬಲಿತೆ ಡಾಕಮ್ಮ 529 ಮತಗಳು.
ಹಾದಿಗಲ್ಲು ಕ್ಷೇತ್ರ : ಬಿಜೆಪಿ ಬೆಂಬಲಿತ ಎಚ್.ಆರ್. ವೆಂಕಟೇಶ್ 510 ಮತಗಳು, ಕಾಂಗ್ರೆಸ್ ಬೆಂಬಲಿತ ಉಮೇಶ್ 361 ಮತಗಳು.
ಮಾಳೂರು ಕ್ಷೇತ್ರ: ಕಾಂಗ್ರೆಸ್ ಬೆಂಬಲಿತ ಎಚ್. ಉಮೇಶ್ 910 ಮತಗಳು, ಬಿಜೆಪಿ ಬೆಂಬಲಿತ ಎಂ. ಜಯಂತ್ 630 ಮತಗಳು.
 ಮೇಗರವಳ್ಳಿ ಕ್ಷೇತ್ರ: ಕಾಂಗ್ರೆಸ್ ಬೆಂಬಲಿತ ಹಸಿರುಮನೆ ಮಹಾಬಲೇಶ್ 591 ಮತಗಳು, ಬಿಜೆಪಿ ಬೆಂಬಲಿತ ಪಿ. ಮಹೇಶ್ 467 ಮತ, ಜೆಡಿಎಸ್ ಬೆಂಬಲಿತ ಜಯರಾಂ 246 ಮತ, ಪಕ್ಷೇತರ ಅಭ್ಯರ್ಥಿ ಕೆ. ಕೃಷ್ಣಪ್ಪ 33 ಮತಗಳು.
ಲಿಂಗಾಪುರ ಕ್ಷೇತ್ರ : ಬಿಜೆಪಿ ಬೆಂಬಲಿತ ಸಾಲೇಕೊಪ್ಪ ರಾಮಚಂದ್ರ 712 ಮತ, ಕಾಂಗ್ರೆಸ್ ಬೆಂಬಲತ ಎಚ್. ರಾಮಕೃಷ್ಣ 603 ಮತಗಳು.
ಆರಗ ಕ್ಷೇತ್ರ: ಬಿಜೆಪಿ ಬೆಂಬಲಿತ ಸಿ. ಬಿ. ಈಶ್ವರ್ 1059 ಮತ, ಕಾಂಗ್ರೆಸ್ ಬೆಂಬಲಿತ ಜಿ.ಎಸ್. ನಾರಾಯಣರಾವ್ 654 ಮತಗಳು.
ಕೋಣಂದೂರು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ಮೈಥಿಲಿ ಸತೀಶ್ 626 ಮತ, ಬಿಜೆಪಿ ಬೆಂಬಲಿತೆ ನಾಗರತ್ನಾ ಮುರುಘಾರಾಜ್ 441 ಮತಗಳು.
ಬಿದರಗೋಡು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ಕೇಳೂರು ಮಿತ್ರ 779 ಮತ, ಬಿಜೆಪಿ ಬೆಂಬಲಿತ ಎಚ್. ಸುಬ್ರಹ್ಮಣ್ಯ 456 ಮತಗಳು.
ಶಿಕಾರಿಪುರ:ಬಿಜೆಪಿ ತೆಕ್ಕೆಗೆ
ಶಿಕಾರಿಪುರ:
ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. 14 ಕ್ಷೇತ್ರಗಳಲ್ಲಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಸಂಜೆ 6 ಗಂಟೆಯ ನಂತರವೂ ಮತ ಎಣಿಕೆ ಮುಂದುವರಿದಿತ್ತು.

ಲಭ್ಯ ಮಾಹಿತಿಯ ಅನುಸಾರ 10 ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಂಪಾದಿಸಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ತಲಾ ಎರಡರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಪಕ್ಷದ ಅಭೂತಪೂರ್ವ ಸಾಧನೆಯು ಈ ಕ್ಷೇತ್ರದ ಬಿಜೆಪಿ ಶಾಸಕ ಬಿ.ವೈ.ರಾಘವೇಂದ್ರ ಅವರಿಗೆ ಹೊಸ ಹುರುಪು ನೀಡಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News