×
Ad

​ ಸಂತ್ರಸ್ತ ಗಿರಿಜನ ಕುಟುಂಬಗಳಿಗೆ ದಿಡ್ಡಳ್ಳಿಯಲ್ಲೇ ಜಾಗ ಒದಗಿಸಲು ಆಗ್ರಹ: ಎ.ಕೆ. ಸುಬ್ಬಯ್ಯ

Update: 2017-01-14 23:05 IST

ಮಡಿಕೇರಿ,ಜ.14: ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ನೆಲೆಸಿರುವ ಆದಿವಾಸಿ ನಿವೇಶನ ರಹಿತ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ನಿವೇಶನಗಳನ್ನು ಒದಗಿಸಬೇಕೆಂದು ಆದಿವಾಸಿಗಳ ಭೂಮಿ ವಸತಿ ಹೋರಾಟ ಸಮಿತಿಯ ಪ್ರಮುಖ ಎ.ಕೆ. ಸುಬ್ಬಯ್ಯ ಅವರು ದೃಢಪಡಿಸುವುದರೊಂದಿಗೆ, ದಿಡ್ಡಳ್ಳಿಯ ಆದಿವಾಸಿ ಕುಟುಂಬಗಳಿಗೆ ಹೊರ ಭಾಗದಲ್ಲಿ ನಿವೇಶನ ನೀಡುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.


ನಗರದ ಕಮ್ಯೂನಿಟಿ ಸಭಾಂಗಣದಲ್ಲಿ ಆದಿವಾಸಿಗಳ ಭೂಮಿ ವಸತಿ ಹೋರಾಟ ಸಮಿತಿಯ ವತಿಯಿಂದ ವಿವಿಧ ಜನಪರ ಹೋರಾಟ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಿವಾಸಿಗಳ ಗುಡಿಸಲು ತೆರವು ಗೊಳಿಸಿದ ದಿಡ್ಡಳ್ಳಿ ಪ್ರದೇಶ ಮೀಸಲು ಅರಣ್ಯವೆಂದು ತಿಳಿಸುವ ಮೂಲಕ ಹೋರಾಟದ ಹಾದಿ ತಪ್ಪಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮುಂದಾಳತ್ವದಲ್ಲಿ ಆ ಜಾಗದ ಕುರಿತಾದ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಸ್ಪಷ್ಟಪಡಿಸಿದರು.


ದಿಡ್ಡಳ್ಳಿಯ ಗುಡಿಸಲು ತೆರವುಗೊಳಿಸಿರುವ ಪ್ರದೇಶ ಸರ್ವೇ ನಂಬರ್ 106/7ಎ ಯಲ್ಲಿ ಮತ್ತು ಇದರಲ್ಲಿ 8,500 ಎಕರೆ ಪೈಸಾರಿ ಜಾಗವಿದ್ದು, 300 ರಿಂದ 400 ಎಕರೆ ಕಾಫಿ ತೋಟ ಸೇರಿದಂತೆ ಸರಾಸರಿ 80 ಆದಿವಾಸಿ ಕುಟುಂಬಗಳನ್ನು ಒಳಗೊಂಡ 9 ಗಿರಿಜನ ಹಾಡಿಗಳಿವೆ. ಆರ್‌ಟಿಸಿಯಲ್ಲಿ ದಿಡ್ಡಳ್ಳಿಯ ಜಾಗವನ್ನು ಅರಣ್ಯ ಪೈಸಾರಿ ಎಂದು ತೋರಿಸಲಾಗಿದ್ದರೂ, ಅಂತಹ ಒಂದು ಭೂ ವರ್ಗವೆ ಇಲ್ಲವೆಂದು ಸ್ಪಷ್ಟಪಡಿಸಿ, ದಿಡ್ಡಳ್ಳಿ ಜಾಗದ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇತ್ಯರ್ಥಪಡಿಸಿ ನಿವೇಶನ ರಹಿತ ಆದಿವಾಸಿಗಳಿಗೆ ಜಾಗ ಒದಗಿಸುವಂತೆ ಆಗ್ರಹಿಸಿದರು.


 ದಿಡ್ಡಳ್ಳಿಯ ಆದಿವಾಸಿ ಕುಟುಂಬಗಳಿಗೆ ವಿತರಿಸಲು ಜಿಲ್ಲೆಯ ವಿವಿಧೆಡೆಗಳಲ್ಲಿ ಗುರುತಿಸಿರುವ ಜಾಗವನ್ನು ಆಯಾ ಪ್ರದೇಶದ ಆದಿವಾಸಿಗಳಿಗೆ ನೀಡುವಂತೆ ಎ.ಕೆ. ಸುಬ್ಬಯ್ಯ ಸಲಹೆ ನೀಡಿದರಲ್ಲದೆ, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಒಂದೊಮ್ಮೆ ದಿಡ್ಡಳ್ಳಿಯಲ್ಲಿ ನೆಲೆಸಿರುವ ಗಿರಿಜನರಲ್ಲಿ ಯಾರಾದರು ಸರಕಾರ ಒದಗಿಸುವ ನಿವೇಶನಕ್ಕೆ ತೆರಳಲು ಆಸಕ್ತಿ ಹೊಂದಿದ್ದಲ್ಲಿ ತಮ್ಮ ಅಭ್ಯಂತರವಿಲ್ಲವೆಂದು ಸ್ಪಷ್ಟಪಡಿಸಿದರು.


ಜಿಲ್ಲಾ ಸಮಿತಿ ರಚನೆ: ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಜಿಲ್ಲಾ ಸಮಿತಿಯನ್ನು ರಚಿಸಿಕೊಳ್ಳಲಾಗಿದೆಯೆಂದು ಎ.ಕೆ. ಸುಬ್ಬಯ್ಯ ತಿಳಿಸಿದರು.
ಸಮಿತಿ 22 ಮಂದಿ ಸದಸ್ಯರನ್ನು ಒಳಗೊಂಡಿದ್ದು, ಡಿ.ಎಸ್. ನಿರ್ವಾಣಪ್ಪ ಅವರು ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮುಂದಿನ ಮಾರ್ಚ್ ಮೊದಲು ಇಲ್ಲವೆ ಎರಡನೆ ವಾರದಲ್ಲಿ ಜಿಲ್ಲೆಯ ಆದಿವಾಸಿಗಳು ಮತ್ತು ದಲಿತರ ಬೃಹತ್ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆಯೆಂದು ಸ್ಪಷ್ಟಪಡಿಸಿದರು.
ಉನ್ನತ ಮಟ್ಟದ ತನಿಖೆಯಾಗಲಿ- ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು ಮಾತನಾಡಿ, ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಪ್ರಮುಖರಾದ ಡಿಎಸ್. ನಿರ್ವಾಣಪ್ಪ, ಅಮಿನ್ ಮೊಹಿಸಿನ್, ಜೆ.ಕೆ. ಅಪ್ಪಾಜಿ, ಮುತ್ತಮ್ಮ, ಪ್ರೇಮ್ ಕುಮಾರ್, ವಸಂತ್, ಕೆ.ಬಿ. ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News