×
Ad

ಮಾನಸಿಕ ಅಸ್ವಸ್ಥೆ ಮೇಲೆ ಗಸ್ತು ನಿರತ ಎಎಸ್‌ಐನಿಂದ ಅತ್ಯಾಚಾರ

Update: 2017-01-15 20:26 IST

ತುಮಕೂರು, ಜ.15: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಅತ್ಯಾಚಾರವೆಸಗಿರುವ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ.

ಅತ್ಯಾಚಾರವೆಸಗಿದ ಎಎಸ್ ತುಮಕೂರು ಗ್ರಾಮಾಂತರ ಠಾಣೆಯ ಉಮೇಶ್ ಎಂದು ತಿಳಿದು ಬಂದಿದೆ. ಅಷ್ಟಾಗಿ ಸಾಮಾಜಿಕ ತಿಳುವಳಿಕೆಯಿಲ್ಲದೆ ಜಯನಗರದ ನೃಪತುಂಗ ಬಡಾವಣೆಯ ಮಹಿಳೆಯೊಬ್ಬರು ಶನಿವಾರ ರಾತ್ರಿ 1:30ರ ವೇಳೆಯಲ್ಲಿ ಖಾಸಗಿ ಜೀಪಿನಲ್ಲಿ ಗಸ್ತಿನಲ್ಲಿದ್ದ ಉಮೇಶ್ ಅವರಿಗೆ ತುಮಕೂರಿನಿಂದ ಮಧುಗಿರಿಗೆ ಹೋಗುವ ಬೈಪಾಸ್ ರಸ್ತೆಯ ಸೇತುವೆ ಬಳಿ ಕಾಣಿಸಿದ್ದು. ಮಹಿಳೆಯ ಪೂರ್ವಾಪರ ವಿಚಾರಿಸಿದ ಎಎಸ್ಐ ಮನೆಗೆ ಬಿಡುವುದಾಗಿ ಜೀಪ್ ಹತ್ತಿಸಿಕೊಂಡಿದ್ದು, ಜೀಪ್‌ನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ.

ರಾತ್ರಿ 1:30ರ ಸುಮಾರಿಗೆ ಸಿಕ್ಕ ಮಹಿಳೆಯನ್ನು ರಾತ್ರಿ 2:30ರವರೆಗೆ ಜೀಪ್ ನಲ್ಲಿಯೇ ಸುತ್ತಿಸಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು ಅಲ್ಲದೆ, ಹಲ್ಲೆಯನ್ನು ನಡೆಸಿದ್ದಾರೆ ಎಂಬುದು ಸಂತ್ರಸ್ಥ ಮಹಿಳೆಯ ಕುಟುಂಬದ ದೂರಾಗಿದೆ.

ರಾತ್ರಿ 3:30ರ ಸುಮಾರಿಗೆ ಸಂತ್ರಸ್ಥ ಮಹಿಳೆಯ ಸಹೋದರಿಯ ದೂರವಾಣಿಗೆ ಕರೆಮಾಡಿದ ಪೊಲೀಸರು ನಿಮ್ಮ ಸಹೋದರಿ ಸಿಕ್ಕಿದ್ದು, ಅಂತರಸನಹಳ್ಳಿ ಸೇತುವೆ ಬಳಿ ಇದ್ದಾರೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಇನ್ನೇನು ಸಹೋದರಿಯನ್ನು ಕರೆತರಲು ಸಿದ್ದವಾಗುತ್ತಿದ್ದ ಸಹೋದರನಿಗೆ ಮತ್ತೆ ಕರೆ ಮಾಡಿದ ಪೊಲೀಸರು ನಮ್ಮ ಜೀಪಿನಲ್ಲಿಯೇ ಕರೆದುಕೊಂಡು ಬರುವುದಾಗಿ ಹೇಳಿ ವಿಳಾಸ ಕೇಳಿ ತಿಳಿದುಕೊಂಡಿದ್ದಾರೆ.

ಸಂತ್ರಸ್ಥ ಮಹಿಳೆಯೊಂದಿಗೆ ಜಯನಗರ ಬಸ್ ನಿಲ್ದಾಣದ ಬಳಿ ಬಂದು ಜೀಪ್‌ನಿಂದ ಕೆಳಗೆ ಇಳಿಸಿದ್ದಾರೆ. ಈ ವೇಳೆ ಮಹಿಳೆ ನನ್ನನ್ನು ಹಾಳು ಮಾಡಿದರು ಎಂದು ತಮ್ಮ ತಂದೆ ಮತ್ತು ತಾಯಿಗೆ ಹೇಳಿ ಕಿರುಚಿಕೊಂಡಿದ್ದು, ಈ ವೇಳೆ ಅಕ್ಕಪಕ್ಕದವರು ಎದ್ದು ಜೀಪ್ ಬಳಿ ಬರುವ ವೇಳೆ ಪೊಲೀಸರು ತಮ್ಮ ವಾಹನದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ತಮ್ಮ ಮಗಳಿಂದ ನಡೆದ ಘಟನೆಯ ವಿವರ ಪಡೆದ ಸಂತ್ರಸ್ಥ ಮಹಿಳೆಯ ಹೆತ್ತವರು ರವಿವಾರ ಮಧ್ಯಾಹ್ನ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಇಶಾಪಂತ್ ಸಂತ್ರಸ್ಥ ಮಹಿಳೆಯ ಅಹವಾಲು ಆಲಿಸಿದರಲ್ಲದೆ, ಆರೋಪಿ ಎಎಸ್ಐ ಉಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಇಶಾ ಪಂತ್, ಇದೊಂದು ಗಂಭೀರ ಪ್ರಕರಣವಾಗಿದ್ದು, ರಕ್ಷಣೆ ನೀಡಬೇಕಾದ ಪೊಲೀಸರೇ ಅತ್ಯಾಚಾರದಂತಹ ಕೃತ್ಯಗಳಿಗೆ ಇಳಿದಿರುವುದು ದುರದೃಷ್ಟಕರ. ಪ್ರಕರಣ ಖಾಸಗಿ ವಾಹನದಲ್ಲಿ ನಡೆದಿದೆ. ಬುಲೆರೋ ಜೀಪನ್ನು ಬಳಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News