ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಹಲವರಿಗೆ ಗಾಯ
ಚಿಕ್ಕಮಗಳೂರು, ಜ.16: ಕೆಎಸ್‌ಆರ್‌ಟಿಸಿ ವೇಗದೂತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ವಸ್ತಾರೆ ಬಳಿ ಸೋಮವಾರ ನಡೆದಿದೆ.
ಚಿಕ್ಕಮಗಳೂರು ವಿಭಾಗದ ಕಡೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸು ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ಸಮಯದಲ್ಲಿ ವಸ್ತಾರೆ ಸಮೀಪ ವೇಗವಾಗಿ ಚಲಿಸುತ್ತಿದ್ದ ಬಸ್ಸು ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಬಿಡುವ ವೇಳೆ ವೇಗವಾಗಿ ಚಲಿಸಿದ ಪರಿಣಾಮ ರಸ್ತೆ ಬದಿ ಚರಂಡಿ ಮೇಲೆ ಸಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಚರಂಡಿಯಾಚೆ ಸಣ್ಣ ಮೈದಾನದ ಮೇಲೆ ಮಗುಚಿ ಬಿದ್ದಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಈ ವೇಳೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ತಉರ್ತು ಚಿಕಿತ್ಸೆ ನೀಡಿ ಕಳುಹಿಸಲಾಯಿತು. ಇಬ್ಬರು ವೃದ್ದರಿಗೂ ಗಾಯಗಳಾಗಿವೆ.