×
Ad

ಸರಗಳ್ಳರ ಬಂಧನ: ಆರೋಪಿಗಳಿಂದ 6 ಲಕ್ಷದ 46 ಸಾವಿರ ರೂ ಮೌಲ್ಯದ ಚಿನ್ನಾಭರಣ, ಬೈಕ್ ವಶ

Update: 2017-01-16 19:49 IST

ಹಾಸನ,ಜ.16: ನಗರದ ಸುತ್ತ ಮುತ್ತ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿ ಅವರಿಂದ 6 ಲಕ್ಷದ 46 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾಡ್ ತಿಳಿಸಿದರು.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಒಂಟಿ ಮಹಿಳೆ ತಿರುಗಾಡುತ್ತಿದ್ದರೇ ಅವರನ್ನು ಗುರುತಿಸಿ  ಬೈಕಿನಲ್ಲಿ ಬಂದು ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವ ಬಗ್ಗೆ ಹೆಚ್ಚು ದೂರು ಬರುತ್ತಿತ್ತು. ಇದರಿಂದ ಮಹಿಳೆಯರಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದರಿಂದ ಇದನ್ನು ಅರಿತು ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್ಪಿ ಕೆ.ಬಿ. ಜಯರಾಂ ಅವರ ನೇತೃತ್ವದಲ್ಲಿ ವೈ. ಸತ್ಯನಾರಾಯಣ, ಪಿಎಸ್‌ಐ ಪ್ರಮೋದ್, ನಗರ ಪೊಲೀಸ್ ಠಾಣೆ ಪಿಎಸ್‌ಐ ಪಿ. ಸುರೇಶ್ ಹಾಗೂ ಸಿಬ್ಬಂದಿಗಳಾದ ಹರೀಶ್, ಲೋಹಿತ್, ಪ್ರಸನ್ನ ಕುಮಾರ್ ಮತ್ತು ಜಮೀಲ್ ಅಹಮದ್ ಇವರ ಒಂದು ತಂಡವನ್ನು ರಚಿಸಲಾಯಿತು.

ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ವಿಜಯನಗರದಲ್ಲಿ ಅನುಮಾನಸ್ಪದವಾಗಿ ಬೈಕಿನಲ್ಲಿ ತಿರುಗಾಡುತ್ತಿದ್ದ ಮೂವರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಹಾಸನ ನಗರದ ವಿವಿಧ ಕಡೆಗಳಲ್ಲಿ ಬೈಕ್ ಕಳವು ಮಾಡಿದ ಬಗ್ಗೆ ಮೊದಲು ಮಾಹಿತಿ ಕೊಟ್ಟರು. ನಂತರದಲ್ಲಿ 6 ಕಡೆಗಳಲ್ಲಿ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿತು.

ಇದರಲ್ಲಿ 2 ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ, 5 ಪ್ರಕರಣ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ, 2 ಪ್ರಕರಣ ಹೊಳೆನರಸೀಪುರ ಠಾಣೆ, 1 ಪ್ರಕರಣ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.ಹೇಮಾವತಿ ನಗರ ನಿವಾಸಿ ಡಿಪ್ಲೊಮ ವಿದ್ಯಾರ್ಥಿ ಸಂತೋಷ್ (28), ರಂಗೋಲಿ ಹಳ್ಳದಲ್ಲಿ ವಾಸವಾಗಿರುವ ಟ್ರಾಕ್ಟರ್ ಚಾಲಕ ಪ್ರೀತಮ್ (19), ಹೊಸಲೈನ್ ರಸ್ತೆ ಶ್ರೀವೆಂಕಟಶ್ವರ ಶಾಲೆ ಎದುರು ಇರುವ ಪಾತ್ರೆ ವ್ಯಾಪಾರಿ ಲೋಹಿತ್ (26) ಬಂಧಿತ ಆರೋಪಿಗಳು. ಬಂಧಿತರಿಂದ 6 ಲಕ್ಷದ 46 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News