ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ವಿಶ್ವನಾಥ್ ಶೆಟ್ಟಿ ಹೆಸರೂ ತಿರಸ್ಕೃತ: ಸಿಎಂ ಪ್ರತಿಕ್ರಿಯೆ ಏನು ನೋಡಿ
ಬೆಂಗಳೂರು, ಜ. 17: ‘ಏನ್ ಮಾಡೋದಪ್ಪಾ ಪ್ರತಿ ಬಾರಿ ಹೀಗೆ ಆಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಕುರಿತು ಈ ಪರಿಯಾಗಿ ಅಸಹಾಯಕತೆ ತೋಡಿಕೊಂಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಶಿಫಾರಸು ಮಾಡಿದ್ದ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಬಗ್ಗೆ ಮಾಹಿತಿ ಇಲ್ಲ. ನ್ಯಾ.ವಿಶ್ವನಾಥ್ ಹೆಸರು ತಿರಸ್ಕರಿಸಿರುವ ಪತ್ರ ಇನ್ನೂ ನನ್ನ ಕೈಗೆ ತಲುಪಿಲ್ಲ. ಪತ್ರ ತಲುಪಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು.
ರಾಜ್ಯ ಸರಕಾರ ನ್ಯಾಯಮೂರ್ತಿಗಳ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿದಾಗಲೆಲ್ಲಾ ತಿರಸ್ಕೃತಗೊಳ್ಳುತ್ತಿದೆ. ಏನ್ ಮಾಡೋದಪ್ಪಾ, ಹೀಗೇ ಆಗುತ್ತಿದೆಯಲ್ಲಾ ಎಂದು ಅವರ ಮಾತಿನ ದಾಟಿಯಲ್ಲಿ ಅಸಹಾಯಕತೆಯನ್ನು ಹೊರಹಾಕಿದರು.
ಶೀಘ್ರದಲ್ಲೇ ಸಮೀಕ್ಷೆ : ಹಿಂಗಾರು ಮಳೆ ಬೆಳೆ ನಷ್ಟ ಕುರಿತು ಕೂಡಲೆ ಸಮೀಕ್ಷೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಮುಂಗಾರು ಬೆಳೆ ನಷ್ಟ ಪರಿಹಾರ ಬಿಡುಗಡೆಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಕಳೆದ ವಾರ ನಗರದಲ್ಲಿ ನಡೆದ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿಗಳಿಗೆ ಎರಡನೇ ಬಾರಿಗೆ ಮನವಿ ಮಾಡಿದ್ದೇನೆ. ಆದರೂ ಕೇಂದ್ರ ಸರಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಸಿ.ಎಂ. ಸಿದ್ದರಾಮಯ್ಯ ಆರೋಪಿಸಿದರು.