×
Ad

ಪ್ರಧಾನಿ ಮೋದಿ ಸರ್ವಾಧಿಕಾರಿ: ಮಾಣಿಕ್ ಸರ್ಕಾರ್ ವಾಗ್ದಾಳಿ

Update: 2017-01-17 20:54 IST

ಬೆಂಗಳೂರು, ಜ.17: ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಒಕ್ಕೂಟ ವ್ಯವಸ್ಥೆಯ ಆಡಳಿತದ ಬದಲಿಗೆ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಇದರ ವಿರುದ್ಧ ಜನರು ದಂಗೆ ಏಳಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ದೇಶ ಸರ್ವನಾಶವಾಗಲಿದೆ ಎಂದು ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸರ್ವಾಧಿಕಾರಿಯಂತೆ ಪ್ರಧಾನಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣಗೊಳಿಸುವ ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದ್ದಾರೆ. ಅನಗತ್ಯವಾಗಿ ದೇಶಪ್ರೇಮವನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ದೂರಿದರು.

ಭಾರತದಲ್ಲಿ ಕೈಗಾರಿಕಾ ರಂಗ ಹಾಗೂ ಅಭಿವೃದ್ಧಿ ಬೆಳವಣಿಗೆ ಕುರಿತು ಚರ್ಚೆಸಲು ಅನೇಕ ಮಂಡಳಿಗಳಿದ್ದರೂ, ಕಳೆದ ಮೂರು ವರ್ಷಗಳಿಂದ ಯಾವುದೇ ಮಂಡಳಿಯೊಂದಿಗೆ ಚರ್ಚೆ ನಡೆದಿಲ್ಲ. ಕೇವಲ ನಾಟಕೀಯವಾಗಿ ಮಾತ್ರ ಸಹಕಾರ ಒಕ್ಕೂಟದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಪ್ಪುಹಣ ವಾಪಸ್ಸು ತರುತ್ತೇವೆಂದು ನೋಟು ಅಮಾನ್ಯ ಮಾಡಿದ ಪ್ರಧಾನಿ ಮೋದಿ ಇದುವರೆಗೂ ಪ್ರಧಾನಿ ಹೇಳಿದಷ್ಟು ಪ್ರಮಾಣದಲ್ಲಿ ಕಾರ್ಯಸಾಧಿಸಿಲ್ಲ. ಅಲ್ಲದೆ, ಇದೀಗ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಕಡಿಮೆಯಾಗಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇವೆಲ್ಲವೂ ಜನರನ್ನು ಹಾದಿ ತಪ್ಪಿಸುವ ಕುತಂತ್ರಗಳಾಗಿವೆ. ಹಣಬಲ, ತೋಳಿನ ಬಲ ಮತ್ತು ಮಾಧ್ಯಮಗಳ ಬಲದಿಂದ ವ್ಯವಸ್ಥಿತವಾಗಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದ ಅವರು, ನಿಜ ಜೀವನದಲ್ಲಿ ದಿನದಿಂದ ದಿನಕ್ಕೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅವರು ವಿಶ್ಲೇಷಿಸಿದರು.

 ದೇಶದಲ್ಲಿ ಶೇ 70ರಷ್ಟು ಜನರಿಗೆ ದಿನಕ್ಕೆ 20ರಿಂದ 25 ರೂ.ಗಳು ಖರ್ಚು ಮಾಡುವ ಶಕ್ತಿ ಇಲ್ಲ. ಇನ್ನೊಂದು ಕಡೆಯಲ್ಲಿ ಶೇ 35ರಷ್ಟು ಜನರು ಈಗಲೂ ಅನಕ್ಷರಸ್ಥರಾಗಿದ್ದು, ಹೆಬ್ಬೆಟ್ಟು ಹಾಕುವ ಮೂಲಕ ತಮ್ಮ ಕೂಲಿ ಪಡೆಯುತ್ತಿದ್ದಾರೆ. ಶೇ 50ರಷ್ಟು ತಾಯಂದಿರು ಹಾಗೂ ಸಹೋದರಿಯರು ಅಪೌಷ್ಟಿಕತೆಯಿಂದ ಮತ್ತು ಶೇ 50ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯಿಂದ ನರಳುತ್ತಿದ್ದಾರೆ. ಹೀಗಿದ್ದರೂ, ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿ ನಡೆಯುತ್ತಿದೆ ಎನ್ನುವ ಭ್ರಮೆಯನ್ನು ಬಿಜೆಪಿ ಬಿ್ತುತ್ತಿದೆ ಎಂದು ಅವರು ಟೀಕಿಸಿದರು.

ಭಾರತ ಇಂದಿಗೂ ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯನ್ನೇ ಹೊಂದಿದ್ದು, ಶೇ 70ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲೇ ವಾಸಿಸುತ್ತಾ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಇವರಿಗೆ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರಗಳಾಗಲಿ ಯಾವುದೇ ನೆರವು ನೀಡುತ್ತಿಲ್ಲ. ಹೀಗಾಗಿ, ಕಳೆದ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ 35ರಷ್ಟು ಏರಿಕೆ ಕಂಡಿದೆ. ದಿಗ್ಭ್ರಮೆಯನ್ನು ಹುಟ್ಟಿಸುವಂಥ ಇಂಥ ಸಂಗತಿಯ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಕೇವಲ ಶೇ 1ರಷ್ಟು ಉದ್ಯಮಿಗಳು ದೇಶದ ಸಂಪತ್ತಿನಲ್ಲಿ ಶೇ 60-70ರಷ್ಟು ಪಾಲು ಹೊಂದಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳ ಹೆಸರಿನಲ್ಲಿ ಈ ಆಸ್ತಿಯನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆದರೂ, ಪ್ರಧಾನಿ ಮೋದಿ ನಿಜವಾದ ಭಾರತವನ್ನು ಮರೆತು ಕೇವಲ 5-6 ನಗರಗಳಲ್ಲಿರುವ ಜನರ ಬಗ್ಗೆ ಅನುಕಂಪ ತೋರಿಸುತಿ್ತದ್ದಾರೆ ಎಂದು ಅವರು ಟೀಕಿಸಿದರು.

ದೇಶದಲ್ಲಿ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ಜನರನ್ನು ವಂಚಿಸುತ್ತಾ ಬಂದಿವೆ. ಈ ಎರಡೂ ಪಕ್ಷಗಳು ಚುನಾವಣೆ ಬಂದ ತಕ್ಷಣ ಧರ್ಮ ಮತ್ತು ಜಾತಿಗಳ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತವೆ. 2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳಲ್ಲಿ ಒಂದೇ ಒಂದು ಕೂಡ ಇದುವರೆಗೆ ಈಡೇರಿಲ್ಲ. ಶೇ 20ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಬೀದಿಗೆ ಬಿದ್ದಿದ್ದಾರೆ ಎಂದು ಮಾಣಿಕ್ ಸರ್ಕಾರ್ ಆಕ್ರೋಶ ವ್ಯಕ್ತಪಡಿಸಿದರು. ಸಂವಾದದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪದಾಧಿಕಾರಿಗಳಾದ ಸತ್ಯನಾರಾಯಣ, ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರ್‌ರಾವ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾದ ರಾಜಕೀಯ ವ್ಯವಸ್ಥೆ ಬಲಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಪರ್ಯಾಯವಾಗಬೇಕಾದ ಅಂಗ ದುರ್ಬಲವಾಗಿದೆ. ಸಾಮಾನ್ಯ ಜನರು ಮುಂದೊಂದು ದಿನ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ಪಡೆಯುತ್ತಾರೆ.

-ಮಾಣಿಕ್ ಸರ್ಕಾರ್, ತ್ರಿಪುರಾ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News