ಡಿಜಿಟಲ್‌ಗಿಂತ ರೈತನಿಗಾಗಿ ಫಾರ್ಮರ್ಸ್ ಇಂಡಿಯಾ ಮಾಡಲಿ : ಹೆಚ್.ಡಿ. ದೇವೇಗೌಡ
ಹಾಸನ , ಜ.17 : ದೇಶದಲ್ಲಿ ರೈತನು ಸಮಸ್ಯೆ ಎದುರಿಸುತ್ತಿರುವುದರಿಂದ ಪ್ರಧಾನಿಯವರು ಡಿಜಿಟಲ್ ಇಂಡಿಯಾಗಿಂತ ಫಾರ್ಮರ್ಸ್ ಇಂಡಿಯಾ ಯೋಜನೆಗಳನ್ನು ಮಾಡಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲೆಲ್ಲೂ ಕುಡಿಯುವ ನೀರಿಗೆ ಬಹಳ ತೊಂದರೆ ಆಗಿದೆ. ರೈತನ ಬೆಳೆಗೆ ನೀರಿಲ್ಲದೆ ಬೆಳೆ ನಷ್ಟಹೊಂದುತ್ತಿದೆ. ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ದೇಶದಲ್ಲಿ ದಿನೇ ದಿನೇ ರೈತ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ನಾನೋಬ್ಬ ರೈತನ ಮಗನಾಗಿ ರೈತರ ಸಮಸ್ಯೆಯನ್ನು ಅರಿತಿದ್ದೇನೆ. ನಿಮ್ಮ ಡಿಜಿಟಲ್ ಅನುಷ್ಠಾನಕ್ಕೆ ಬರಬೇಕಾದರೇ ಅನೇಕ ವರ್ಷಗಳೆ ಕಳೆಯಬಹುದು. ದೇಶದಲ್ಲಿ ಅನೇಕರು ಅವಿದ್ಯವಂತರು ಇದ್ದಾರೆ. ಅವರಿಗೆ ಮೊಬೈಲ್ ಬಳಕೆ ಮೂಲಕ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಆತನನ್ನು ಕಾಪಾಡುವ ಹೊಣೆಗಾರಿಕೆ ಈ ದೇಶದ ನಮ್ಮನಾಳುವ ಜನಪ್ರತಿನಿಧಿಗಳಿಗೆ ಇರಬೇಕು ಎಂದು ಸಲಹೆ ನೀಡಿದರು.
ಕೃಷಿ ಕ್ಷೇತ್ರದಲ್ಲಿ ನಂಬಿರುವ ರೈತರು ನಷ್ಟ ಅನುಭವಿಸಿ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಡಿಜಿಟಲ್ ಮಾಡುವ ಕನಸು ಕಾಣುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೇ ನಾನು ಡಿಜಿಟಲ್ ಇಂಡಿಯಾ ಬೇಡ ಎಂದು ಹೇಳಲಾರೆ. ರೈತರ ಸಾಲಮನ್ನಾ ಮಾಡುವುದಾಗಿ ಹೇಳುವ ಅವರು ಹಾಗೆಯೇ ರೈತರ ಅಸಲು ಮನ್ನಾ ಮಾಡುವುದಾಗಿ ಹೇಳಲಿ ಎಂದರು.
ನೈಸ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ವಿಚಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನೈಸ್ ಕಂಪನಿ ಮೋಸ ಮಾಡಿರುವ ವಿಚಾರದ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಸತ್ಯಾಂಶ ಏನು ಇದೆ ಹೊರ ಬರಬೇಕು. ಇದರಲ್ಲಿ ನಾನು ಪ್ರಧಾನಿಯಾಗಿ, ಸಿಎಂ ಹಾಗೂ ಸಚಿವನಾಗಿ ತಪ್ಪು ಮಾಡಿದ್ದರೇ ಯಾವ ತನಿಖೆಗೂ ಸಿದ್ಧ ಎಂದು ಬಹಿರಂಗ ಸವಾಲು ಹಾಕಿದರು.
ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ನಿರ್ಧರಿಸಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರಸ್ ಇಬ್ಬರೂ ಕೂಡ ಹಣದ ಮೂಲಕ ಹೋರಾಟ ಮಾಡಲು ಹೊರಟಿದ್ದಾರೆ. ನಮಗೆ ಹಣದಿಂದ ಹೋರಾಟ ಬೇಡ ಎಂದರು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಅಖಿಲೇಶ್ ಯಾದವ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ರಾಜಕೀಯ ಎನ್ನುವುದು ನಿಂತ ನೀರಲ್ಲ. ಹರಿಯುವ ನೀರು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂತೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬಹುದು ಎಂದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಾಯಕತ್ವವನ್ನು ಕೊನೆಗೊಳಿಸಲು ಅನೇಕ ಬಾರಿ ಬಿಜೆಪಿ-ಕಾಂಗ್ರೆಸ್ ಒಂದಾಗಿತ್ತು ಎಂದು ವ್ಯಂಗ್ಯವಾಡಿದರು.
ರಾಜ್ಯ ಲೋಕಾಯುಕ್ತದ ಶಕ್ತಿ ಕುಗ್ಗಿದೆ. ಹಿಂದೆ ಇದ್ದ ಶಕ್ತಿ ಈಗ ಸಲ್ಪವು ಇಲ್ಲ. ಸತ್ತು ಹೋಗಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಶಾಸಕ ಹೆಚ್.ಎಸ್. ಪ್ರಕಾಶ್, ಶಿವರಾಮೇಗೌಡ, ಹೊಂಗೆರೆ ರಘು ಉಪಸ್ಥಿತರಿದ್ದರು.