ಕೋಟ್ಟಾ ಕಾಯ್ದೆ ಜಾರಿಗೆ ಸೂಚನೆ : ಧೂಮಪಾನ ತಡೆಗೆ ಕಠಿಣ ಕ್ರಮ

Update: 2017-01-17 15:36 GMT

ಬೆಂಗಳೂರು, ಜ.17: ಮೂವತ್ತು ಜನ ಆಸೀನರಾಗಲು ಸ್ಥಳಾವಕಾಶ ಅಥವಾ ಮೂವತ್ತು ಕೊಠಡಿಗಳುಳ್ಳ ಹೊಟೇಲ್, ರೆಸ್ಟೊರೆಂಟ್ ಹಾಗೂ ಏರೋಡ್ರಮ್‌ಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಇದ್ದರೆ ಮಾತ್ರ ಧೂಮಪಾನಕ್ಕೆ ಅವಕಾಶ ಎಂದು ಜಾಗೃತಿ ದಳದ ಸಹಾಯಕ ಆಯುಕ್ತ ನಾಗರಾಜ್ ಹೇಳಿದ್ದಾರೆ.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ತಂಬಾಕು ಕಾನೂನುಗಳ ಪರಿಣಾಮಕಾರಿ ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂವತ್ತು ಜನ ಆಸೀನರಾಗಲು ಸ್ಥಳಾವಕಾಶ ಅಥವಾ ಮೂವತ್ತು ಕೊಠಡಿಗಳುಳ್ಳ ಹೊಟೇಲ್, ರೆಸ್ಟೊರೆಂಟ್ ಹಾಗೂ ಏರೋಡ್ರಮ್‌ಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆಯಾಗಿರುವ ಸ್ಥಳದಲ್ಲಿ ಮಾತ್ರ ಧೂಮಪಾನ ಮಾಡುವುದನ್ನು ಹೊರತು ಪಡಿಸಿ, ಮಿಕ್ಕ ಪ್ರದೇಶವೆಲ್ಲ ಧೂಮಪಾನ ಮುಕ್ತ ಪ್ರದೇಶವೆಂದು ಕೋಟ್ಟಾ ಕಾಯ್ದೆಯಲ್ಲಿ ತಿಳಿಸಲಾಗಿದೆಯೆಂದು ನಾಗರಾಜ್ ಮಾಹಿತಿ ನೀಡಿದರು.

 ಕೋಟ್ಪಾ ಕಾಯ್ದೆಯಡಿಯಲ್ಲಿ ತಂಬಾಕು ಸೇವನೆಗೆ ಎರಡು ಅವಕಾಶಗಳಿದ್ದು, ಹೊಟೇಲ್ ಮತ್ತು ರೆಸ್ಟೊರೆಂಟ್ ಹಾಗೂ ಏರೋಡ್ರಮ್‌ಗಳಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಧೂಮಪಾನ ಮಾಡುವವರಿಗೆ ಮಾತ್ರ ಅವಕಾಶವಿದೆ ಎಂದ ಅವರು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಧಿಕಾರಿಗಳು ಕಡ್ಡಾಯವಾಗಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.

 ಆರ್‌ಸಿಎಚ್‌ಒ ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಮಹೇಶ್ ಮಾತನಾಡಿ, ಪರೋಕ್ಷ ಧೂಮಪಾನಿಗಳೂ ಸಹ ನೂತನ ಶ್ವಾಸ ಸಂಬಂಧಿತ ರೋಗಿಗಳಾಗಿದ್ದು, ಹಳೆಯ ರೋಗಿಗಳ ಜೊತೆಗೆ ಶೇ.50 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. ಆರೋಗ್ಯವಂತರು ಸಾರ್ವಜನಿಕ ಸ್ಥಳದಲ್ಲಿ ಶುದ್ಧ ಗಾಳಿ ಸೇವಿಸುವುದು ಮೂಲಭೂತ ಹಕ್ಕಾಗಿರುವುದರಿಂದ ಪ್ರತಿಯೊಬ್ಬರು ಈ ಕುರಿತು ಜಾಗೃತರಾಗುವುದು ತುಂಬಾ ಅವಶ್ಯಕ ಎಂದು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ ಮಾತನಾಡಿ, ಕ್ಯಾನ್ಸರಿನಿಂದ ಪ್ರತಿ ವರ್ಷ ಸರಿ ಸುಮಾರು ಒಂದೂವರೆ ಲಕ್ಷ ಸಾವು ಸಂಭಸುತ್ತಿದ್ದು, ತಂಬಾಕು ಸೇವನೆಯಿಂದ ಮತ್ತೆ 33 ಸಾವಿರ ಜನರು ಕ್ಯಾನ್ಸರ್ ರೋಗಿಗಳಾಗಿ ಸೇರ್ಪಡೆಯಾಗುತ್ತಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ ಡಾ.ಎಲ್.ಎಸ್.ಚಂದ್ರಕಿರಣ್ ಸೇರಿ ಪ್ರಮುಖರು ಹಾಜರಿದ್ದರು.

‘ಹೊಟೇಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಎಲ್ಲೆಲ್ಲಿ ಧೂಮಪಾನಿಗಳಿಗೆ ಪ್ರತ್ಯೇಕವಾಗಿ ಕೊಠಡಿಗಳಿಲ್ಲವೋ ಅಂತಹ ಕಡೆ ಕಟ್ಟುನಿಟ್ಟಾಗಿ ಕೋಟ್ಪಾಕಾಯ್ದೆ ಪಾಲನೆ ಮಾಡಬೇಕು’

-ನಾಗರಾಜ್, ಜಾಗೃತಿ ದಳದ ಸಹಾಯಕ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News