ಮೂಢನಂಬಿಕೆಗೆ ಮಾಧ್ಯಮಗಳು ಪ್ರಚಾರ ಕೊಡಬಾರದು: ಸಿಎಂ ಸಿದ್ದರಾಮಯ್ಯ

Update: 2017-01-17 15:40 GMT

ಬೆಂಗಳೂರು, ಜ.17: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಮಂಗಳವಾರ ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ 12.5 ಕೋಟಿ ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಉದ್ಘಾಟಿಸಿ ಮಾತನಾಡಿದರು.

 ಇಂದಿನ ಮಕ್ಕಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮೂಲ ಜ್ಞಾನ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿಸದೆ, ಎಂಜಿಯರಿಂಗ್, ವೈದ್ಯಕೀಯ, ಕಂಪ್ಯೂಟರ್ ವಿಜ್ಞಾನ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತಬೇಕು. ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಎಲ್ಲಾ ರೀತಿಯ ಸಹಾಯ, ಸಹಕಾರ, ಪ್ರೋತ್ಸಾಹ ನೀಡಲು ಸರಕಾರ ಸಿದ್ಧ ಎಂದು ಹೇಳಿದರು.

ತಂತ್ರಜ್ಞಾನ ಹೆಚ್ಚಾದಂತೆಲ್ಲ ದೇಶದಲ್ಲಿ ಮೂಢನಂಬಿಕೆ, ಅಂಧ ಶ್ರದ್ಧೆ, ಕಂದಾಚಾರ ಹೆಚ್ಚಾಗುತ್ತಿದೆ. ವಿಜ್ಞಾನಿಗಳು ಗ್ರಹಗಳ ಮೇಲೆ ಕಾಲಿಟ್ಟಿದ್ದಾರೆ. ಮಂಗಳಯಾನ, ಚಂದ್ರಯಾನ ಕೈಗೊಂಡು, ಅಲ್ಲಿ ನಡೆದಾಡಿಕೊಂಡು ಬಂದಿದ್ದಾರೆ. ಇಷ್ಟಾದರೂ ಮೂಢನಂಬಿಕೆ, ಕಂದಾಚಾರದ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಪೋಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ಕೊಡಬಾರದು ಎಂದು ಮನವಿ ಮಾಡಿದರು.

  ಇಂದು ಸುಶಿಕ್ಷಿತರಲ್ಲೇ ಮೂಢನಂಬಿಕೆ ಹೆಚ್ಚಿರುವುದು ದುರದೃಷ್ಟಕರ. ಚಂದ್ರಗ್ರಹಣ, ಸೂರ್ಯಗ್ರಹಣ ಸಂದರ್ಭದಲ್ಲಿ ಜನರು ಮನೆಬಿಟ್ಟು ಹೊರಬರುವುದಿಲ್ಲ. ಹೊಲ ಗದ್ದೆಗಳಲ್ಲಿ ಕೂಲಿ ಮಾಡುವ ಜನ ಯಾವುದೇ ಭಯವಿಲ್ಲದೆ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡುಗುತ್ತಾರೆ. ಆದರೆ ಅರ್ಧಂಬರ್ಧ ತಿಳಿದುಕೊಂಡವರು ಮೂಢನಂಬಿಕೆಗೆ ಬಲಿಯಾಗಿ ಮನೆ ಬಿಟ್ಟು ಹೊರಗಡೆ ಬರುವುದಿಲ್ಲ ಎಂದರು.

ರಾಜ್ಯದಲ್ಲಿ ಇನ್ನೂ ನಾಲ್ಕು ತಾರಾಲಯಗಳು.. : ಹುಬ್ಬಳ್ಳಿ, ಮಂಗಳೂರು, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ತಾರಾಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮಂಗಳೂರಿನ ಪಿಲಿಕುಳದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಹೊಸ ತಾರಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ತಿಳಿಸಿದರು.

ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೊಬೈಲ್ ತಾರಾಲಯವನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರದಲ್ಲಿ ಆರಂಭಿಸಿದ್ದು, ಅದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿ ಪ್ರೊ.ಯು.ಆರ್. ರಾವ್, ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಅಳವಡಿಸಿರುವ ಜರ್ಮನಿಯ ಡಾ. ಮಾರ್ಟಿನ್ ವಿಚ್‌ಮನ್, ಜವಾಹರ್ ಲಾಲ್ ತಾರಾಲಯದ ನಿರ್ದೇಶಕಿ ಡಾ. ಶೈಲಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News