ಬಿಎಸ್ಪಿ ಗೆಲುವು ಬಹುಜನರ ಗೆಲುವಾಗಲಿ

Update: 2017-01-17 18:44 GMT

ನಿರೀಕ್ಷೆಯಂತೆಯೇ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷವಂತೂ ಉತ್ತರ ಪ್ರದೇಶದಲ್ಲಿ ಅತ್ಯಂತ ಮುತ್ಸದ್ಧಿ ತೀರ್ಮಾನವನ್ನು ತೆಗೆದುಕೊಂಡಿದೆ. ಸಮಾಜವಾದಿ ಪಕ್ಷದ ಯುವ ನಾಯಕ ಅಖಿಲೇಶ್‌ರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಕ್ಕೆ ಅದು ಮುಂದಾಗಿದೆ. ಸ್ವತಂತ್ರವಾಗಿ ಉತ್ತರಪ್ರದೇಶದ ಚುನಾವಣಾ ಕಣಕ್ಕಿಳಿದರೆ, ಅದು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕಡಿಮೆ. ಜೊತೆಗೆ ಜಾತ್ಯತೀತ ಮತಗಳು ಇನ್ನಷ್ಟು ಹಂಚಿಹೋಗಿ ಅದರ ಲಾಭವನ್ನು ಬಿಜೆಪಿ ಪಡೆಯುವ ಸಾಧ್ಯತೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ, ಇಂತಹದೊಂದು ಮೈತ್ರಿಗೆ ಹೊರತಾದ ಬೇರೆ ದಾರಿಯೇ ಕಾಂಗ್ರೆಸ್‌ಗಿಲ್ಲ. ಒಂಟಿಯಾಗಿ ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನೇನಾದರೂ ಎದುರಿಸಿದ್ದಿದ್ದರೆ ಅದು ತೀವ್ರ ಮುಖಭಂಗವನ್ನು ಅನುಭವಿಸಬೇಕಾಗುತ್ತಿತ್ತು. ಈ ಮೈತ್ರಿ ಎಸ್ಪಿ ಪಾಲಿಗೆ ಎಷ್ಟು ಒಳಿತನ್ನು ಮಾಡುತ್ತದೆ ಎನ್ನುವುದು ಅನಂತರದ ಮಾತು, ಕಾಂಗ್ರೆಸ್‌ಗಂತೂ ತುಂಬಾ ಲಾಭವಿದೆ.

ಉತ್ತರ ಪ್ರದೇಶ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಈ ಬಾರಿ ಶೀಲಾ ದೀಕ್ಷಿತ್ ಅವರನ್ನು ಮುಂದಿಟ್ಟುಕೊಂಡು ಎದುರಿಸ ಹೊರಟಾಗಲೇ ಹಲವರು ಹುಬ್ಬೇರಿಸಿದ್ದರು. ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿದ ಹೆಗ್ಗಳಿಗೆ ಶೀಲಾದೀಕ್ಷಿತ್‌ಗೆ ಸೇರಿದೆ. ಒಂದೆಡೆ ವಯಸ್ಸು, ಜೊತೆಗೆ ಅವರ ಮೇಲಿರುವ ಆರೋಪಗಳು. ಹೀಗೆ ಹಲವು ಋಣಾತ್ಮಕ ವರ್ಚಸ್ಸನ್ನೇ ಹೊಂದಿರುವ ಶೀಲಾದೀಕ್ಷಿತ್‌ಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ನಾಯಕತ್ವವನ್ನು ವಹಿಸಿಕೊಳ್ಳುವುದಕ್ಕೆ ಇದ್ದ ಒಂದೇ ಒಂದು ಅರ್ಹತೆಯೆಂದರೆ ಅದು ಆಕೆಯ ಜಾತಿ. ಬ್ರಾಹ್ಮಣರ ನಡುವೆ ಇನ್ನೂ ತನ್ನ ಸ್ಥಾನಮಾನವನ್ನು ದೀಕ್ಷಿತ್ ಅವರು ಉಳಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ದುರ್ಬಲ ಜಾತಿಗಳ ಮತಗಳು ಎಸ್ಪಿ ಮತ್ತು ಬಿಎಸ್ಪಿಗಳ ನಡುವೆ ಹಂಚಿ ಹೋಗುವ ಸಂದರ್ಭದಲ್ಲಿ ಮೇಲ್ಜಾತಿ ಅದರಲ್ಲೂ ಬ್ರಾಹ್ಮಣರ ಮತಗಳನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಕಾಂಗ್ರೆಸ್ ಪಕ್ಷದ್ದು. ಇಂದು ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಬ್ರಾಹ್ಮಣರ ಮತಗಳೇ ಚುನಾವಣೆಯಲ್ಲಿ ನಿರ್ಣಾಯಕವಾಗಿದೆ. ಬಿಎಸ್ಪಿ ಈಗಾಗಲೇ ಮುಸ್ಲಿಮ್ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆಯನ್ನು ನೀಡಿದೆ. ಆದರೆ ಮುಸ್ಲಿಮರು ಮತ್ತು ದಲಿತರ ಜನಸಂಖ್ಯೆಗೆ ಹೋಲಿಸಿದರೆ ಬಿಎಸ್ಪಿ ಬ್ರಾಹ್ಮಣ ಜಾತಿಯ ಅಭ್ಯರ್ಥಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದೆ.

ಇದು ಮೇಲ್ನೋಟಕ್ಕೆ ಬಿಎಸ್ಪಿಯ ಚುನಾವಣಾ ತಂತ್ರವೇ ಆಗಿದ್ದರೂ, ದೂರಗಾಮಿಯಾಗಿ ಬಹುಜನ ಚಳವಳಿ ಹೈಜಾಕ್ ಆಗಬಹುದಾದ ಎಲ್ಲ ಸಾಧ್ಯತೆಗಳೂ ಕಾಣುತ್ತವೆ. ಮಾಯಾವತಿ ನೇತೃತ್ವದಲ್ಲಿರುವ ಬಿಎಸ್ಪಿ ಕಳೆದ ಐದು ವರ್ಷಗಳಲ್ಲಿ ವಿರೋಧಪಕ್ಷವಾಗಿ ನಿರ್ಣಾಯಕ ಪಾತ್ರಗಳನ್ನು ವಹಿಸಿಲ್ಲ ಎನ್ನುವುದನ್ನೂ ಇಲ್ಲಿ ಗಮನಿಸಬೇಕಾಗಿದೆ. ರೋಹಿತ್ ವೇಮುಲಾ, ದಾದ್ರಿ ಹತ್ಯೆ, ಮುಝಫ್ಫರ್‌ನಗರದಲ್ಲಿ ನಡೆದ ಕೋಮುಹಿಂಸೆ, ದಲಿತರ ಮೇಲೆ ನಡೆಯುತ್ತಿರುವ ವ್ಯಾಪಕ ದೌರ್ಜನ್ಯ ಇವೆಲ್ಲದರ ವಿರುದ್ಧ ಒಂದು ರಾಷ್ಟ್ರಮಟ್ಟದ ಚಳವಳಿಯನ್ನು ರೂಪಿಸಿ ದಲಿತರು ಮತ್ತು ಮುಸ್ಲಿಮರನ್ನು ಸಂಘಟಿಸುವ ಎಲ್ಲ ಅವಕಾಶ ಅವರಿಗಿತ್ತು. ಆದರೆ ಅವರ ಪಕ್ಷದ ಪ್ರತಿಕ್ರಿಯೆ ನೀರಸವಾಗಿತ್ತು ಮಾತ್ರವಲ್ಲ, ರೋಹಿತ್ ವೇಮುಲಾ ಪರವಾಗಿ ಧ್ವನಿಯೆತ್ತಿದ ಕನ್ನಯ್ಯಿ ಮತ್ತು ಅವರ ಸಂಗಡಿಗರನ್ನು ಜಾತಿಯ ಹೆಸರಿನಲ್ಲೇ ಮಟ್ಟ ಹಾಕುವುದಕ್ಕೆ ಹವಣಿಸಿದರು. ಕನ್ನಯ್ಯೆ ದಲಿತನಲ್ಲವಾದುದರಿಂದ ರೋಹಿತ್ ವೇಮುಲಾನ ಪರವಾಗಿ ಮಾತನಾಡುವ ಹಕ್ಕು ಅವನಿಗಿಲ್ಲ ಎಂದು ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ‘ಕಮ್ಯನಿಸ್ಟರು ದಲಿತ ಚಳವಳಿ’ಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಭಯವೇ ಇದಕ್ಕೆ ಕಾರಣವಾಗಿತ್ತು. ಆದರೆ ಕಮ್ಯನಿಸ್ಟರ ಈ ಪ್ರಯತ್ನವನ್ನು ಬಗ್ಗು ಬಡಿಯಲು ಮಾಯಾವತಿ ಆರಿಸಿಕೊಂಡ ದಾರಿ ಋಣಾತ್ಮಕವಾದುದಾಗಿತ್ತು. ನಿಜಕ್ಕೂ ಕಮ್ಯನಿಸ್ಟರು ವೇಮುಲಾ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲೇ ಅದನ್ನು ಮುಂದಿಟ್ಟು ಮಾಯಾವತಿಯವರಿಗೆ ಚಳವಳಿ ನಡೆಸುವ ಅವಕಾಶವಿತ್ತು.

ಉನಾದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗಲೂ ಅದನ್ನು ಮುಂದಿಟ್ಟು ತನ್ನ ರಾಜಕೀಯ ನಡೆಯನ್ನು ರೂಪಿಸಿಕೊಳ್ಳುವಲ್ಲಿ ಬಿಎಸ್ಪಿ ಎಡವಿತು. ಅವರ ವೈಫಲ್ಯವನ್ನು ಎಡ ಪಕ್ಷಗಳು ಬಳಸಿಕೊಂಡವು. ಇದರಲ್ಲಿ ತಪ್ಪು ಯಾರದು? ಇತ್ತ ಮುಸ್ಲಿಮರ ಮೇಲೆ ವ್ಯಾಪಕವಾಗಿ ನಡೆದ ದೌರ್ಜನ್ಯ ಸಂದರ್ಭದಲ್ಲಿ, ಗೋಮಾಂಸ ನಿಷೇಧಕ್ಕೆ ಸಂಬಂಧಿಸಿ ಮಾಯಾವತಿಯವರು ಅಂತರ ಕಾಪಾಡಿಕೊಳ್ಳಲು ಇಷ್ಟಪಟ್ಟರು. ಬಹುಶಃ ಹಿಂದುಳಿದ ವರ್ಗಗಳಲ್ಲೇ ಬಲಾಢ್ಯ ಜಾತಿಗಳನ್ನು ಓಲೈಸುವ ಉದ್ದೇಶದಿಂದ ಅವರು ಈ ಅಂತರವನ್ನು ಕಾಪಾಡಿಕೊಂಡು ಬಂದಿದ್ದಾರೆ. ದಲಿತರ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋರಾಡಬೇಕಾಗಿದ್ದ ಬಿಎಸ್ಪಿ ಪಟೇಲ್, ಜಾಟ್ ಸಮುದಾಯದ ಮೀಸಲಾತಿ ಹೋರಾಟಗಳಿಗೆ ಪರೋಕ್ಷ ಬೆಂಬಲವನ್ನು ನೀಡಿತು. ಸದ್ಯದ ರಾಜಕೀಯಕ್ಕೆ ಇದರಿಂದ ಲಾಭವಾಗಬಹುದಾದರೂ, ದಲಿತರ ಅಸ್ಮಿತೆಗೆ ದೂರಗಾಮಿಯಾಗಿ ಕೆಟ್ಟ ಪರಿಣಾಮ ಬೀರಬಲ್ಲ ಅಂಶಗಳು ಇವು. ಬಹುಶಃ ಅಧಿಕಾರ ರಹಿತ ಅವಧಿಯಲ್ಲಿ ದಲಿತ, ಮುಸ್ಲಿಮ್ ಮತ್ತು ಇನ್ನಿತರ ದುರ್ಬಲ ಸಮುದಾಯನ್ನು ತಳಸ್ತರದಿಂದ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ವಿಫಲವಾದ ಕಾರಣದಿಂದಲೇ ಇಂದು ಬ್ರಾಹ್ಮಣ ಅಭ್ಯರ್ಥಿಗಳಿಗೆ ಅತ್ಯಧಿಕ ಸ್ಥಾನಗಳನ್ನು ಹಂಚಿ, ಚುನಾವಣೆಯಲ್ಲಿ ಗೆಲ್ಲಬೇಕಾದಂತಹ ಸ್ಥಿತಿಗೆ ಬಂದು ನಿಂತಿದ್ದಾರೆ ಮಾಯಾವತಿ. ಜೊತೆಗೆ, ಸಮಾಜವಾದಿ ಪಕ್ಷಕ್ಕೆ ಮತ ನೀಡಿದರೆ ಮತಗಳು ಪೋಲಾಗಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಬೆದರಿಸಿ ಮುಸ್ಲಿಮರಿಂದ ಮತಗಳನ್ನು ಕೇಳುವಂತಹ ಸ್ಥಿತಿಗೆ ಬಂದು ನಿಂತಿದ್ದಾರೆ.

ಇತ್ತ ಸಮಾಜವಾದಿ ಪಕ್ಷ ಮೇಲ್ನೋಟಕ್ಕೆ ಹೋಳಾದಂತೆ ಕಂಡು ಬಂದರೂ, ಅಖಿಲೇಶ್ ಪಕ್ಷದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಲಾಯಂ ಸಿಂಗ್ ಮತ್ತು ಅಖಿಲೇಶ್ ನಡುವೆ ಈವರೆಗೆ ನಡೆದಿರುವುದೆಲ್ಲ ಒಂದು ನಾಟಕ ಎನ್ನುವುದೂ ಬಹಿರಂಗವಾಗಹತ್ತಿದೆ. ದಶಕದ ಹಿಂದೆ ಬಿಜೆಪಿಯ ಸಂಗಕ್ಕಾಗಿ ಕರ್ನಾಟಕದಲ್ಲಿ ದೇವೇಗೌಡ-ಕುಮಾರಸ್ವಾಮಿ ನಡೆಸಿದ ಹುಸಿ ಜಗಳ, ಉತ್ತರಪ್ರದೇಶದಲ್ಲಿ ಮುಲಾಯಂ-ಅಖಿಲೇಶ್ ಹೆಸರಲ್ಲಿ ಮರುಕಳಿಸಿದೆ. ಕಾಂಗ್ರೆಸ್‌ನ ಮೂಲಕ ಬ್ರಾಹ್ಮಣರ ಮತಗಳನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಅಖಿಲೇಶ್‌ಗೂ ಇದೆ. ಸ್ವತಂತ್ರವಾಗಿ ಸ್ಪರ್ಧಿಸಿದರೆ ಅದರ ಲಾಭ, ಬಿಎಸ್ಪಿ, ಬಿಜೆಪಿ ತನ್ನದಾಗಿಸಿಕೊಳ್ಳಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿದೆ. ಅದೇನೇ ಇರಲಿ. ಸದ್ಯಕ್ಕೆ ಉತ್ತರ ಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಬಿಎಸ್ಪಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎನ್ನುವುದರಲ್ಲೂ ಎರಡು ಮಾತಿಲ್ಲ. ಆದರೆ ಅದು ಬಿಎಸ್ಪಿ ಗೆಲುವಾಗದೆ, ಬಹುಜನ ಸಮಾಜದ ಗೆಲುವಾಗಿ ಎಷ್ಟರಮಟ್ಟಿಗೆ ಪರಿವರ್ತನೆಯಾಗಬಹುದು ಎನ್ನುವುದರ ಬಗ್ಗೆ ಪ್ರಶ್ನೆಗಳು ಉಳಿದೇ ಉಳಿಯುತ್ತವೆ. ಯಾಕೆಂದರೆ, ಅಂತಿಮವಾಗಿ ದಲಿತರ ಹೆಸರಿನಲ್ಲಿ ಮೇಲ್ಜಾತಿಯ ಜನರೇ ನಮ್ಮನ್ನಾಳುತ್ತಾರೆ ಎಂದರೆ ದುರ್ಬಲ ಸಮುದಾಯಕ್ಕೆ ಅದು ಎಷ್ಟರಮಟ್ಟಿಗೆ ಲಾಭವನ್ನುಂಟು ಮಾಡೀತು? ಈ ಪ್ರಶ್ನೆಗೆ ಬಿಎಸ್ಪಿ ನಾಯಕರು ಆದಷ್ಟು ಬೇಗ ಉತ್ತರ ಕಂಡುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News