×
Ad

ಅಭಿಷೇಕ್ ಆತ್ಮಹತ್ಯೆಗೆ ಪ್ರಚೋದಿಸಿದವರ ಬಂಧನಕ್ಕೆ ಆಗ್ರಹಿಸಿ ಯುವ ಮೋರ್ಚಾ ಧರಣಿ

Update: 2017-01-18 15:50 IST

ಶಿಕಾರಿಪುರ, ಜ.18: ಶೃಂಗೇರಿಯ ಪ್ರತಿಭಾನ್ವಿತ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆಗೆ ಪ್ರಚೋದಿಸಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಯುವ ಮೋರ್ಚಾವು ಬುಧವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ನಡೆಸಿತು.

ಈ ಸಂದರ್ಭದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ, ನ್ಯಾಯವಾದಿ ಶಿವರಾಜ್ ಮಾತನಾಡಿ, ಹುತಾತ್ಮ ಯೋಧರ ಗೌರವಾರ್ಥ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಎನ್ನೆಸೆಸ್ ಘಟಕದ ವತಿಯಿಂದ ಜ.7ರಂದು ಆಯೋಜಿಸಲಾದ ಕಾರ್ಯಕ್ರಮವನ್ನು ರದ್ದುಗೊಳಿಸಲು ಸ್ಥಳೀಯ ವಿದ್ಯಾರ್ಥಿ ಸಂಘಟನೆ ತೀವ್ರ ಒತ್ತಡವನ್ನು ತಂದಿದ್ದು, ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಅಭಿಷೇಕ್ ಒತ್ತಡಕ್ಕೆ ಮಣಿಯದೆ ಕಾರ್ಯಕ್ರಮವನ್ನು ನಡೆಸುವ ದೃಢ ಸಂಕಲ್ಪವನ್ನು ಹೊಂದಿದ್ದರು. ಆದರೆ ದೇಶದ ಹುತಾತ್ಮ ಯೋಧರನ್ನು ಅಪಮಾನಿಸುವ ದುರುದ್ದೇಶದಿಂದ ಪಕ್ಷ ಸಂಘಟನೆಗೆ ಸೀಮಿತವಾದ ವಿದ್ಯಾರ್ಥಿ ಸಂಘಟನೆ ಮುಖಂಡರು ಪತ್ರಿಕಾಗೋಷ್ಠಿಯ ಮೂಲಕ ಕಾರ್ಯಕ್ರಮ ತಡೆಯುವ ಬೆದರಿಕೆ ಹಾಕಿ, ಎಬಿವಿಪಿ ವಿರುದ್ಧ ಸಲ್ಲದ ಅಪಪ್ರಚಾರದ ಜತೆಗೆ ಕೆಲ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ವಿರುದ್ದ ದೂರು ದಾಖಲಾಗುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಧರಣಿನಿರತರು ಎಂದು ಆರೋಪಿಸಿದರು.

ಹುತಾತ್ಮ ಯೋಧರ ಗೌರವಾರ್ಥ ಕಾಲೇಜಿನಲ್ಲಿ ಎಬಿವಿಪಿ ನೇತೃತ್ವದಲ್ಲಿನ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಲ್ಲಿ ಸ್ಥಳೀಯ ವಿದ್ಯಾರ್ಥಿ ಸಂಘಟನೆ ಯಶಸ್ವಿಯಾಗಿದೆ ಎಂದವರು ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ ಕಿರುಕುಳವನ್ನು ನೀಡಲಾಗಿದ್ದು ಘಟನೆಯಿಂದ ಮಾನಸಿಕವಾಗಿ ನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರನ್ನು ಕೂಡಲೇ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮದ ಮೂಲಕ ಅಭಿಷೇಕ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

ನಂತರದಲ್ಲಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ, ಹೋತನಕಟ್ಟೆ ಗ್ರಾಪಂ ಅಧ್ಯಕ್ಷ ಮಧು ಪುಟ್ಟಪ್ಪ, ಗಜೇಂದ್ರ, ಅಡಗಂಟಿ ಬಸವರಾಜಪ್ಪ, ಶಾಂತಪ್ಪ, ಶ್ರೀನಿವಾಸ್, ಭಾಸ್ಕರ್, ಕುಮಾರ್, ಲೋಕೇಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News