ನಾಳೆ ಶಿವಮೊಗ್ಗ ನಗರಕ್ಕೆ ಸಿಎಂ

Update: 2017-01-18 17:38 GMT

ಶಿವಮೊಗ್ಗ, ಜ.18: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಮತ್ತು ಉದ್ಘಾಟನೆಗೆ ಜ.20ರಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ಗೋಪಾಳದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾ ಸಂಕೀರ್ಣದ ಉದ್ಘಾಟನೆ, ಪಾಲಿಕೆಯ ಆವರಣದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಕಂಚಿನ ಪ್ರತಿಮೆಯ ಅನಾವರಣ, ಪೌರಕಾರ್ಮಿಕರ ಕಲ್ಯಾಣ ಭವನಕ್ಕೆ ಶಿಲಾನ್ಯಾಸ, ಸೂಡಾ ವಾಣಿಜ್ಯ ಸಂಕೀರ್ಣದ ಎರಡನೆಯ ಅಂತಸ್ತಿನ ಕಟ್ಟಡಕ್ಕೆ ಶಿಲಾನ್ಯಾಸ, ತ್ಯಾವರೆಕೊಪ್ಪದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹೆಲ್ತ್ ಕ್ಲಿನಿಕ್ ಉದ್ಘಾಟನೆ,ಬೊಮ್ಮನಕಟ್ಟೆಯಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡದ ಉದ್ಘಾಟನೆ, ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಶಿಲಾನ್ಯಾಸ, ಗಾರ್ಡನ್ ಏರಿಯಾದಲ್ಲಿ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಶಿಲಾನ್ಯಾಸ, ಸೋಮಿನಕೊಪ್ಪ ಉರ್ದು ಶಾಲಾ ಹೊಸ ಕಟ್ಟಡಕ್ಕೆ ಶಿಲಾನ್ಯಾಸ, ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆಗೆ ಶಿಲಾನ್ಯಾಸ ಮಾಡಲಿದ್ದಾರೆ ಎಂದರು.


ಕ್ರಮ ಸಕ್ರಮ ಕಾಯ್ದೆಯಡಿ 5 ಸಾವಿರ ಜನರಿಗೆ ಹಕ್ಕುಪತ್ರ ವಿತರಣೆ, ಗಾಂಧಿ ಪಾರ್ಕಿನಲ್ಲಿ ನಿರ್ಮಿಸಿರುವ 100 ಅಡಿ ಎತ್ತರದ ಸ್ಮಾರಕ ಧ್ವಜಸ್ಥಂಭದ ಅನಾವರಣ, ಲೆಕ್ಕಪರಿಶೋಧನಾ ಇಲಾಖೆ ಕಚೇರಿಯ ಕಟ್ಟಡ ಮತ್ತು ಅಧಿಕಾರಿ ವಸತಿ ಗೃಹದ ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ರೋಶನ್ ಬೇಗ್, ಎಚ್. ಆಂಜನೇಯ, ಪ್ರಮೋದ್ ಮಧ್ವರಾಜ್,ಕೃಷ್ಣ ಭೈರೇಗೌಡ, ಸಂಸದ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಶಾಸಕಿ ಶಾರದಾ ಪೂರ್ಯನಾಯ್ಕಾ, ಸಭಾಪತಿ ಶಂಕರಮೂರ್ತಿ, ಎಂಎಲ್‌ಸಿ ಭಾನುಪ್ರಕಾಶ್ ಮತ್ತು ಆರ್. ಪ್ರಸನ್ನಕುಮಾರ್, ಮೇಯರ್ ಎಸ್.ಕೆ. ಮರಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮೇಯರ್ ಎಸ್.ಕೆ. ಮರಿಯಪ್ಪ, ಸೂಡಾ ಅಧ್ಯಕ್ಷ ಉಸ್ಮಾನ್, ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ಮತ್ತು ಯೋಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News