ತಾಪಂ ಸದಸ್ಯರ ಕಾರು ಢಿಕ್ಕಿ

Update: 2017-01-18 17:40 GMT

ಸಿದ್ದಾಪುರ, ಜ.18: ತಾಲೂಕು ಪಂಚಾಯತ್ ಸದಸ್ಯರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಪಾಲಿಬೆಟ್ಟದಲ್ಲಿ ನಡೆದಿದೆ.


ಪಾಲಿಬೆಟ್ಟದ ಊರುಕುಪ್ಪೆ ನಿವಾಸಿ ಎಂ.ಬಿ ಅಬ್ದುಲ್ ಸಲಾಂ (50) ಎಂಬವರು ಮಂಗಳವಾರ ರಾತ್ರಿ ಮಸೀದಿಯಲ್ಲಿ ಪ್ರಾರ್ಥನೆ ನಿರ್ವಹಿಸಿ ಮುಖ್ಯ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ತಾಪಂ ಸದಸ್ಯ ಅಜಿತ್ ಕರುಂಬಯ್ಯ ಅಜಾಗರುಕತೆಯಿಂದ ಸಲಾಂ ಅವರಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ.


ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಇವರನ್ನು ಕೂಡಲೇ ಗೋಣಿಕೊಪ್ಪಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಢಿಕ್ಕಿ ಹೊಡೆದ ಬಳಿಕ ಕಾರನ್ನು ನಿಲ್ಲಿಸದೆ ತೆರಳಿದ ತಾಪಂ ಸದಸ್ಯರ ವಿರುದ್ಧ ಸಲಾಂನ ಸಹೋದರ ಎಂ.ಬಿ. ಅಬ್ದುಲ್ ನಾಸರ್ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.


ಪೊಲೀಸರು ಪ್ರಕರಣವನ್ನು ದಾಖಲಿಸಿ ಕಾರನ್ನು ವಶಕ್ಕೆ ಪಡೆದು, ತಾಪಂ ಸದಸ್ಯನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


ತಾಪಂ ಸದಸ್ಯ ಪಾನಮತ್ತನಾಗಿ ಅತೀ ವೇಗದಿಂದ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೆ ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News