×
Ad

ಕಪ್ಪುಹಣ: ಸೋಮವಾರಪೇಟೆ ತಾಪಂ ಸಭೆಯಲ್ಲಿ ಹೊಕೈ

Update: 2017-01-19 23:30 IST

ಸೋಮವಾರಪೇಟೆ, ಜ.19: ಗುರುವಾರ ನಡೆದ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಪರಸ್ಪರ ಏಕವಚನ ಪ್ರಯೋಗ, ಕೈ ಮಿಲಾಯಿಸಿದ ಪ್ರಸಂಗ ನಡೆದು, ಸದಸ್ಯನೋರ್ವನನ್ನು ಸಭೆಯಿಂದ ಹೊರತಳ್ಳಿದ ಘಟನೆ ನಡೆದಿದೆ. ಹಳೆ ನೋಟ್ ಅಮಾನ್ಯ ಮಾಡಿದ ನಂತರ ತಾಪಂ ಸದಸ್ಯರೋರ್ವರು 35 ಲಕ್ಷ ರೂ.ಗಳೊಂದಿಗೆ ಸಿಕ್ಕಿಬಿದ್ದ ಪ್ರಸಂಗ ಗುರುವಾರ ನಡೆದ ತಾಲೂಕು ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಗೊಂಡು ಈ ಘಟನೆ ನಡೆಯಿತು.


ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ವೇಳೆ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ರಾಷ್ಟ್ರಾದ್ಯಂತ ನೋಟ್ ಬ್ಯಾನ್ ಆದ ನಂತರ ತಾಪಂ ಸದಸ್ಯರೋರ್ವರು ಶುಂಠಿಕೊಪ್ಪಸಮೀಪದ ರೆಸಾರ್ಟ್‌ಒಂದರಲ್ಲಿ 35ಲಕ್ಷ ರೂ. ಕಪ್ಪು ಹಣ ಸಹಿತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇಂತಹ ಪ್ರಕರಣದಿಂದ ತಾಪಂಗೆ ಹಾಗೂ ಇತರ ಸದಸ್ಯರುಗಳಿಗೆ ಅವಮಾನ. ಆದ್ದರಿಂದ ಅಂತಹ ಸದಸ್ಯರನ್ನು ಸಭೆಯಲ್ಲಿರಿಸಿಕೊಂಡು ಸಭೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಸಂಪೂರ್ಣ ವಿವರಬೇಕೆಂದು ಪಟ್ಟು ಹಿಡಿದರು.


ಈ ಸಂದರ್ಭ ಆರೋಪಿತರೆನ್ನಲಾದ ಕಾಂಗ್ರೆಸ್ ಸದಸ್ಯ ಅನಂತ ಕುಮಾರ್ ಮಧ್ಯೆ ಪ್ರವೇಶಿಸಿ ಅಂದು ನಡೆದ ಘಟನೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ವಿವರಣೆ ನೀಡಿದ್ದೇನೆ ಅಲ್ಲದೆ ತಾಪಂ ಸಭೆಯಲ್ಲಿ ವಿಚಾರ ತಿಳಿಸಲು ಅವಕಾಶ ನೀಡಬೇಕೆಂದು ತಾಪಂ ವ್ಯವಸ್ಥಾಪಕರಿಗೆ ಪತ್ರ ನೀಡಿದ್ದೇನೆ. ತನ್ನ ಆದಾಯದ ಬಗ್ಗೆ ಮೂಲ ದಾಖಲಾತಿಗಳನ್ನು ಸಂಬಂಧಿಸಿದ ಇಲಾಖೆಯನ್ನು ಕೇಳಿ ಪಡೆಯಿರಿ ಎಂದು ತೀರುಗೇಟು ನೀಡಿದರು.

 ಇದರಿಂದ ಕೆರಳಿದ ಸದಸ್ಯ ಮಣಿ ಉತ್ತಪ್ಪನೀವು ಕಾನೂನು ಬದ್ಧವಾಗಿ ಸಂಪಾದಿಸಿದ್ದರೆ ಪೊಲೀಸರೇಕೆ ದಾಳಿ ನಡೆಸುತ್ತಿದ್ದರು? ನಿಮ್ಮಿಂದಿಗೆ ಕೇರಳದ ವ್ಯಕ್ತಿಗಳು ಏಕಿದ್ದರು ತಾವು ಆಡಳಿತಾ ರೂಢ ಕಾಂಗ್ರೆಸ್ ಪಕ್ಷದವರು. ಪ್ರಭಾವ ಬಳಸಿ ಕೇಸ್ ಹಾಕದ ಹಾಗೆ ನೋಡಿಕೊಂಡಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು. ಈ ಸಂದರ್ಭ ಕಾಂಗ್ರೆಸ್‌ನ ಸತೀಶ್, ಅನಂತ್ ಕುಮಾರ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಧ್ಯೆ ಪ್ರವೇಶಿಸಿ ಅನಂತಕುಮಾರ್‌ರವರೇ ಸಭೆಗೆ ಸಮರ್ಪಕವಾದ ಸ್ಪಷ್ಟನೆ ನೀಡಿ ಗೊಂದಲ ಸೃಷ್ಠಿಸಬೇಡಿ ನೀವು ಕೋಟ್ಯಧಿಪತಿಗಳಿರಬಹುದು, ಆಸ್ತಿ ಇರಬಹುದು ಆದರೆ ನಿಮ್ಮ ಬಳಿ ಇದ್ದ ಹಣಕ್ಕೆ ನೀವು ತೆರಿಗೆ ಪಾವತಿಸಿದ್ದೀರಾ ಎಂದು ಪ್ರಶ್ನಿಸಿದಾಗ, ಕೃಷಿ ಆದಾಯಕ್ಕೆ ತೆರಿಗೆ ಎಲ್ಲಿದೆ ಎಂದು ಅನಂತಕುಮಾರ ಮರು ಪ್ರಶ್ನೆ ಹಾಕಿದರು.


ಇದರಿಂದ ಅಸಮಾಧಾನಗೊಂಡ ಮಣಿ ಉತ್ತಪ್ಪ, ಇಂತಹ ಸದಸ್ಯರನ್ನು ಸಭೆಯಲ್ಲಿ ಕುಳ್ಳಿರಿಸಿಕೊಂಡು ಸಭೆ ನಡೆಸುವುದು ಸರಿಯಲ್ಲ ಅವರನ್ನು ಹೊರ ಕಳುಹಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಗೊಂದಲ ಸೃಷ್ಠಿಯಾದಾಗ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸದಸ್ಯರೋರ್ವರ ಬಗ್ಗೆ ಕ್ರಮಕೈಗೊಳ್ಳುವುದು ಹಾಗೂ ಅವರನ್ನು ಸಭೆಯಿಂದ ಹೊರ ಕಳುಹಿಸುವುದು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಈ ಬಗ್ಗೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯೋಣ. ಅವರೇ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ ಸಂದರ್ಭ ಎಲ್ಲಾ ಸದಸ್ಯರು ಈ ಬಗ್ಗೆ ನಿರ್ಣಯ ಕೈಗೊಳ್ಳೋಣ ಎಂದರು.
ಮಣಿ ಉತ್ತಪ್ಪಪ್ರತಿಕ್ರಿಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯೋಣ ಆದರೆ ಅಲ್ಲಿಯವರೆಗೆ ಆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರಬಾರದು ಎಂದು ಪಟ್ಟು ಹಿಡಿದರು.

ಈ ಸಂದರ್ಭ ಸದಸ್ಯ ಅನಂತ ಕುಮಾರ್, ಮಣಿ ಉತ್ತಪ್ಪವಿರುದ್ದ ಏಕವಚನ ಪದ ಪ್ರಯೋಗಿಸಿದ್ದು, ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಅಧ್ಯಕ್ಷೆ ಪುಷ್ಪಾ ರಾಜೇಶ್ ಸಭೆಯನ್ನು ಅರ್ಧಗಂಟೆ ಕಾಲ ಮುಂದೂಡುವುದಾಗಿ ಹೊರ ತೆರಳಿದರು. ಇದೇ ಸಂದರ್ಭ ಮಣಿ ಉತ್ತಪ್ಪ ದರೋಡೆ ಕೋರರು ಎಂದಿದ್ದಕ್ಕೆ ಕೆರಳಿದ ಸದಸ್ಯ ಅನಂತ ಕುಮಾರ್ ಅಸಭ್ಯ ಪದ ಪ್ರಯೋಗ ಮಾಡಿದ್ದಕ್ಕೆ ಮಹಿಳಾ ಸದಸ್ಯರು ಸೇರಿದಂತೆ ಎಲ್ಲರೂ ಅನಂತ ಕುಮಾರ್ ವಿರುದ್ಧ ತಿರುಗಿ ಬಿದ್ದು ತೀವ್ರ ತರಾಟೆಗೆ ತೆಗೆದುಕೊಂಡರು.
ಪರಸ್ಪರ ಮಾತಿನ ಚಕಮಕಿ ವಾಗ್ವಾದಗಳಿಂದ ಕೆರಳಿದ ಇತರ ಸದಸ್ಯರು ಅನಂತ ಕುಮಾರ್‌ರವರನ್ನು ಹಿಡಿದು ಹೊರ ತಳ್ಳಿದ ಘಟನೆಯು ನಡೆಯಿತು.
 ಮಹಿಳಾ ಸದಸ್ಯರು, ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಆದರೆ ಅಸಭ್ಯ ಪದ ಪ್ರಯೋಗವನ್ನೇಕೆ ಮಾಡುತ್ತೀರಿ ಎಂದಾಗ, ಅನಂತ್ ಕುಮಾರ್ ಕ್ಷಮೆ ಯಾಚಿಸಿದರು.
ಸದಸ್ಯರ ನಡುವೆಯೇ ಅರಚಾಟ, ಕಿರುಚಾಟ, ನೂಕಾಟದಿಂದ ಹೊರಗಡೆ ನೆರೆದಿದ್ದ ಸಾರ್ವಜನಿಕರು ಪುಕ್ಕಟೆ ಮನೋರಂಜನೆ ವೀಕ್ಷಿಸಿದರು.
ಪುನಃ ಸಭೆ ಸೇರಿದ ಸದಸ್ಯರು ಪಂಚಾಯತ್ ರಾಜ್ ಅಧಿನಿಯಮದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಂದರ್ಭ ಆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರಲು ಅವಕಾಶವಿಲ್ಲ. ಆದ್ದರಿಂದ ಕಪ್ಪು ಹಣದ ವಿಚಾರ ಚರ್ಚೆ ಮುಗಿಯುವವರೆಗೆ ಸದಸ್ಯ ಅನಂತಕುಮಾರ್ ಹೊರ ಹೋಗಬೇಕೆಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮನವಿ ಮಾಡಿದ ಹಿನ್ನೆಯಲ್ಲಿ ಅನಂತ ಕುಮಾರ್ ಸಭೆಯಿಂದ ಹೊರ ತೆರಳಿದರು.
 ನಂತರ ವಿಷಯಕ್ಕೆ ಸಂಬಂಧಿಸಿದಂತೆ ಬಹುತೇಕ ಸದಸ್ಯರು ಅನಂತ ಕುಮಾರ್ ವರ್ತನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದರು. ನಂತರ ಚರ್ಚೆ ನಡೆದು ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಅವರ ಅಭಿಪ್ರಾಯ ಪಡೆಯುವಂತೆ ತೀರ್ಮಾನಿಸಿ ಅಲ್ಲಿಯವರೆಗೆ ಅನಂತ ಕುಮಾರ್ ಸಭೆಗಳಿಗೆ ಹಾಜರಾಗದಂತೆ ಬಹುಮತದ ನಿರ್ಣಯ ಕೈಗೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News